Publish Date: Sat, 07 Mar 2026 (08:28 IST)
Updated Date: Sat, 07 Mar 2026 (08:32 IST)
ಬೆಂಗಳೂರು: ರಾಜ್ಯದಲ್ಲಿ ಈಗ ಬಿರು ಬಿಸಿಲು ಜನರನ್ನು ಹೈರಾಣಾಗಿಸಿದೆ. ಈ ವಾರಂತ್ಯಕ್ಕೆ ರಾಜ್ಯದಲ್ಲಿ ಮಳೆ ಸೂಚನೆಯಿದೆಯೇ, ಹೇಗಿರಲಿದೆ ಹವಾಮಾನ ಇಲ್ಲಿದೆ ವರದಿ.
ರಾಜ್ಯದಲ್ಲಿ ಪ್ರಸ್ತುತ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು ಹೊರಗೆ ಕಾಲಿಡಲಾಗದಷ್ಟು ಬಿಸಿಲಿನ ವಾತಾವರಣವಿದೆ. ಬೆಳಿಗ್ಗೆ 10 ರಿಂದ ಸಂಜೆ 3 ರವರೆಗೆ ಹೊರಗೆ ಕಾಲಿಡದಿರುವುದೇ ಸೂಕ್ತ ಎನ್ನುವಂತಹ ವಾತಾವರಣವಿದೆ.
ಈ ವಾರ ಎಲ್ಲೂ ಮಳೆಯಾಗಿರಲಿಲ್ಲ. ವಾರಂತ್ಯದಲ್ಲೂ ಯಾವುದೇ ಜಿಲ್ಲೆಗೆ ಮಳೆಯ ಸೂಚನೆಯಿಲ್ಲ. ಬದಲಾಗಿ ಈ ವಾರಂತ್ಯಕ್ಕೆ ಮತ್ತಷ್ಟು ಬಿಸಿಲು ಕಂಡುಬರಲಿದೆ. ವಾರಂತ್ಯಕ್ಕೆ ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 33 ಡಿಗ್ರಿಯಷ್ಟು ಕಂಡುಬರಲಿದ್ದು ಕನಿಷ್ಠ ತಾಪಮಾನ 19 ಡಿಗ್ರಿ ಆಸುಪಾಸಿನಲ್ಲಿರಲಿದೆ. ಈ ವಾರವಿಡೀ ಇದೇ ವಾತಾವರಣವಿತ್ತು.
ರಾಯಚೂರು, ಬಳ್ಳಾರಿ, ಕಲಬುರಗಿ, ಉತ್ತರ ಕನ್ನಡ, ಹುಬ್ಬಳ್ಳಿ, ಧಾರವಾಡ, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ತಲುಪಲಿದೆ. ಉಳಿದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33-35 ಡಿಗ್ರಿಯ ಆಸುಪಾಸಿನಲ್ಲಿರಲಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಶುಭ್ರ ಆಕಾಶವಿರಲಿದ್ದು ಹಗಲಿಡೀ ಬಿಸಿಲು ಕಂಡುಬರುವುದು.