Publish Date: Sun, 25 Oct 2026 (09:01 IST)
Updated Date: Sat, 24 Oct 2026 (20:41 IST)
ಬೆಂಗಳೂರು: ಕರ್ನಾಟಕದಲ್ಲಿ ಹಿಂಗಾರು ಮಾನ್ಸೂನ್ ಪ್ರಭಾವ ಮುಂದುವರಿದಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು-ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಹವಾಮಾನ ಬದಲಾವಣೆ ಹಾಗೂ ಮೇಲ್ಮೈ ಸುಳಿಗಾಳಿಯ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮೋಡಕವಿದ ವಾತಾವರಣದೊಂದಿಗೆ ಮಳೆಯಾಗಲಿದೆ.
ದಕ್ಷಿಣ ಒಳನಾಡು ಮತ್ತು ಬೆಂಗಳೂರು ಸುತ್ತಮುತ್ತ
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಇಂದು ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನದ ನಂತರ ಅಥವಾ ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಗಟ್ಟಿಯಾಗುವ ಸಾಧ್ಯತೆಯಿದ್ದು, ತಾಪಮಾನದಲ್ಲಿ ಇಳಿಕೆಯಾಗಿ ತಂಪಾದ ವಾತಾವರಣ ಇರಲಿದೆ.
ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳು
ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗಗಳಲ್ಲಿ ಸಮುದ್ರದ ತೀರ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಕೆಲವು ಕಡೆಗಳಲ್ಲಿ ಸಾಧಾರಣದಿಂದ ತುಂತುರು ಮಳೆಯಾಗಲಿದೆ.
ಉತ್ತರ ಒಳನಾಡು ಮತ್ತು ಇತರೆ ಭಾಗಗಳು
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದ್ದು, ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾದ್ಯತೆಯಿದೆ. ಆದರೆ ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮುಖ್ಯವಾಗಿ ಒಣ ಹವಾಮಾನ ಮುಂದುವರಿಯಲಿದ್ದು, ಬಿಸಿಲಿನ ವಾತಾವರಣ ಕಂಡುಬರಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ