ಬೆಂಗಳೂರು: ಕರ್ನಾಟಕದಲ್ಲಿ ಚಳಿಯ ನಡುವೆಯೇ ಮಳೆಯ ಸುದ್ದಿ ಕೇಳಿಬಂದಿದೆ. ಈ ದಿನದಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಈಗಾಗಲೇ ವರದಿಯಾಗಿತ್ತು. ಡಿಸೆಂಬರ್ ತಿಂಗಳಲ್ಲಿ ವಾಯುಭಾರ ಕುಸಿತದಿಂದ ಕೆಲವು ದಿನ ಮಳೆಯಾಗಿತ್ತು. ಇದೀಗ ಹೊಸ ವರ್ಷದಲ್ಲಿ ಮೊದಲ ಮಳೆಯಾಗುವ ಸೂಚನೆ ಸಿಕ್ಕಿದೆ.
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಚಂಡಮಾರುತ ಚಲನೆ ಉಂಟಾಗಿರುವ ಪರಿಣಾಮ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ಅಂದರೆ ಜನವರಿ 13 ಮತ್ತು 14 ರಂದು ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಅದಾದ ಬಳಿಕ ಜನವರಿ 16 ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಸೂಚನೆ ಸಿಕ್ಕಿದೆ. ತಾಪಮಾನದಲ್ಲಿ ವಿಪರೀತ ಏರಿಳಿತವಾಗುತ್ತಿದೆ. ಈ ಕಾರಣಕ್ಕೆ ಮಳೆಯ ಸೂಚನೆಯಿದೆ ಎಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 16-17 ಡಿಗ್ರಿಯಷ್ಟು ತಾಪಮಾನ ಏರಿಳಿತವಾಗುತ್ತಲೇ ಇದೆ.
ಬೆಂಗಳೂರು ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಾದ ಮಂಡ್ಯ, ಹಾಸನ, ಕೋಲಾರ, ತುಮಕೂರು, ರಾಮನಗರ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.