ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಮಳೆಯ ಅಬ್ಬರ ಕಡಿಮೆಯಾಗಿತ್ತು. ಈ ವಾರವೂ ಕೆಲವು ಜಿಲ್ಲೆಗಳಲ್ಲಿ ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಮಳೆಯ ಅಬ್ಬರವಿಲ್ಲ. ಆದರೆ ಕರಾವಳಿಯ ಈ ಒಂದು ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನುತ್ತಿದೆ ಹವಾಮಾನ ವರದಿ.
ಈ ವಾರವೂ ರಾಜ್ಯದಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಆದರೆ ಕೆಲವೆಡೆ ಗುಡುಗು ಸಹಿತ ಮಳೆಯ ನಿರೀಕ್ಷೆಯಿದೆ. ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸಾಧಾರಣ ಮಳೆಯಿರಲಿದೆ. ಆದರೆ ಉಡುಪಿ ಜಿಲ್ಲೆಗೆ ಇಂದು ಭಾರೀ ಮಳೆಯ ಸಾಧ್ಯತೆಯಿದೆ.
ಬೆಂಗಳೂರಿನಲ್ಲೂ ಇಂದು ಅಲ್ಲಲ್ಲಿ ಮಳೆ ಮತ್ತು ಮೋಡ ಕವಿದ ವಾತಾವರಣ ನಿರೀಕ್ಷಿಸಲಾಗಿದೆ. ಆದರೆ ನಾಳೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಬೆಳಗಾವಿ, ಯಾದಗಿರಿ, ಬಳ್ಳಾರಿ, ಕಲಬುರಗಿ, ಗದಗ, ರಾಯಚೂರು, ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲೂ ಇಂದು ಭಾರೀ ಮಳೆಯ ನಿರೀಕ್ಷೆಯಿದೆ.
ಉಳಿದಂತೆ ಕೋಲಾರ, ಚಿಕ್ಕಮಗಳೂರು, ತುಮಕೂರು, ಹಾಸನ, ರಾಮನಗರ, ಮೈಸೂರು, ಮಂಡ್ಯ, ವಿಜಯಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೀದರ್, ಬಾಗಲಕೋಟೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಯಿದೆ.