ಬೆಂಗಳೂರು: ಈ ಬಾರಿ ಪ್ರಕೃತಿ ಬೇಸಿಗೆಯಲ್ಲೇ ಮಳೆ ನೀಡುವ ಮೂಲಕ ಉತ್ತಮ ಮಳೆಯ ಸೂಚನೆ ನೀಡಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ಈ ಬಾರಿ ಮುಂಗಾರು ಕೂಡಾ ಹೊಸ ದಾಖಲೆ ಮಾಡಲಿದೆ. ಅದೇನದು ಈ ವರದಿ ನೋಡಿ.
ಹವಾಮಾನ ವರದಿಗಳು ಈಗಾಗಲೇ ಹೇಳಿದಂತೆ ಈ ಬಾರಿ ಮುಂಗಾರು ಮಳೆ ಎಂದಿಗಿಂತ ಮೊದಲೇ ಕೇರಳ ಪ್ರವೇಶ ಮಾಡಲಿದೆ. ಈ ಮೊದಲು ಮೇ 27 ರಂದು ಮುಂಗಾರು ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಇನ್ನೂ ಮೊದಲು ಅಂದರೆ ಮೇ 23 ಅಥವಾ 24 ರಂದೇ ಮುಂಗಾರು ಆಗಮನವಾಗಲಿದೆ ಎಂದು ಲೇಟೆಸ್ಟ್ ಹವಾಮಾನ ವರದಿಗಳು ಹೇಳಿವೆ.
ಈ ವಾರಂತ್ಯದಿಂದ ಕರ್ನಾಟಕಕ್ಕೂ ಮಳೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಮುಂಗಾರು ಹೊಸ ದಾಖಲೆ ಮಾಡಲಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಕರ್ನಾಟಕಕ್ಕೆ ಪ್ರವೇಶವಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳಲ್ಲೇ ಆಗಮನವಾಗುವ ಮೂಲಕ ಹೊಸ ದಾಖಲೆಯಾಗಲಿದೆ.
ಕಳೆ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಮೇ ತಿಂಗಳಲ್ಲಿ ಪ್ರವೇಶ ಮಾಡುವ ಮೂಲಕ ದಾಖಲೆ ಮಾಡುತ್ತಿದೆ. ಈ ಬಾರಿ ಸೆಪ್ಟೆಂಬರ್ ವರೆಗೂ ಉತ್ತಮ ಮಳೆ ನಿರೀಕ್ಷಿಸಲಾಗಿದೆ. ಅರೆಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಅಬ್ಬರ ಕಡಿಮೆಯಾಗಿರುವುದರಿಂದ ಈ ಬಾರಿ ಬೇಗ ಮಳೆಯಾಗಲಿದೆ ಎಂದು ಹೇಳಲಾಗಿದೆ. ಬೇಸಿಗೆ ಮಳೆಯೂ ಧಾರಾಕಾರವಾಗಿ ಸುರಿದಿದ್ದರಿಂದ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಮಸ್ಯೆ ಕಡಿಮೆಯಾಗಿತ್ತು ಎನ್ನಬಹುದು.