ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಇಂದೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಅಪರಾಹ್ನದವರೆಗೂ ದಟ್ಟ ಮೋಡ ಮುಸುಕಿದ ವಾತಾವರಣವಿರುತ್ತಿದ್ದು ಸಂಜೆ ವೇಳೆಗೆ ಮಳೆಯಾಗುತ್ತಿದೆ. ಇಂದೂ ಅದೇ ರೀತಿಯ ವಾತಾವರಣವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಉಳಿದಂತೆ ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಭಾರೀ ಮಳೆಯ ಸೂಚನೆಯಿದೆ. ಇಂದಿನವರೆಗೆ ಇಲ್ಲಿ ಮಳೆಯ ಅಬ್ಬರವಿದೆ. ಆದರೆ ಒಳನಾಡಿನಲ್ಲಿ ಮಳೆಯ ಅಬ್ಬರ ತಕ್ಕಮಟ್ಟಿಗೆ ಕಡಿಮೆಯಾಗಲಿದೆ.
ಉಳಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ರಾಯಚೂರು, ಹಾವೇರಿ, ಶಿವಮೊಗ್ಗ, ಯಾದಗಿರಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ.