ಬೆಂಗಳೂರು: ಕರ್ನಾಟಕದಲ್ಲಿ ಈಗ ಚಳಿ ಮಾಯವಾಗಿ ನಿಧಾನವಾಗಿ ಬೇಸಿಗೆಯ ವಾತಾವರಣ ಶುರುವಾಗಿದೆ. ವಿಶೇಷವಾಗಿ ಈ ಬೇಸಿಗೆಯಲ್ಲಿ ಬೆಂಗಳೂರಿನ ತಾಪಮಾನದ ಬಗ್ಗೆ ಹವಾಮಾನ ಇಲಾಖೆಯ ಎಚ್ಚರಿಕೆ ಗಮನಿಸಿದರೆ ಶಾಕ್ ಆಗ್ತೀರಿ.
ಈ ವರ್ಷ ರಾಜ್ಯದಲ್ಲಿ ಮಳೆ ಮತ್ತು ಚಳಿಗಾಲ ತೀವ್ರವಾಗಿತ್ತು. ಅದೇ ರೀತಿ ಬೇಸಿಗೆಯೂ ತೀವ್ರವಾಗಿರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದಕ್ಕೆ ತಕ್ಕಂತೆ ಫೆಬ್ರವರಿಯಿಂದಲೇ ಹಗಲು ಬಿಸಿಲಿನ ಝಳ ವಿಪರೀತ ಎನಿಸುವಷ್ಟು ಹೆಚ್ಚಾಗಿದೆ.
ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ ದಾಖಲೆಯ ಹಂತ ತಲುಪಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ಈ ಬಾರಿ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ತಾಪಮಾನ 39 ಡಿಗ್ರಿಯವರೆಗೆ ತಲುಪಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ 36 ರಿಂದ 39 ಡಿಗ್ರಿಯವರೆಗೆ ಇರಲಿದೆ. ಹೀಗಾಗಿ ಹಾಟೆಸ್ಟ್ ಬೆಂಗಳೂರನ್ನು ಎದುರಿಸಲು ಸಿದ್ಧರಾಗುವುದು ಉತ್ತಮ. ಮುಂದಿನ 7 ದಿನಗಳವರೆಗೆ ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.