ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹಿಂಗಾರು ಮಳೆ ಅಬ್ಬರಿಸುತ್ತಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಪ್ರವಾಹ ಸದೃಶ ವಾತಾವರಣವಿದೆ. ಕರ್ನಾಟಕ ಮತ್ತು ಬೆಂಗಳೂರಿನ ಇಂದಿನ ಹವಾಮಾನ ವರದಿ ಇಲ್ಲಿದೆ.
ಹಿಂಗಾರು ಮಳೆಯ ಅಬ್ಬರದಿಂದ ರಾಜ್ಯದಲ್ಲಿ ಕಳೆದ 23 ದಿನಗಳಲ್ಲಿ 175.3 ಮಿ.ಮೀ. ಮಳೆಯಾಗಿದೆ. ಕರ್ನಾಟಕದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಕೇವಲ ಶೇ.11 ರಷ್ಟು ಮಳೆಯಾಗಿತ್ತು. ಆದರೆ ಈ ತಿಂಗಳು ಶೇ.66 ರಷ್ಟು ಹೆಚ್ಚು ಮಳೆಯಾಗಿದೆ. ಇದು ಹಿಂಗಾರು ಮಳೆಯ ಅಬ್ಬರಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕದ 12 ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರು ಮಾತ್ರವಲ್ಲದೆ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲೂ ಇಂದು ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಡುವಿಲ್ಲದೇ ಸುರಿಯುತ್ತಿದ್ದ ವರುಣ ನಿನ್ನೆ ತಕ್ಕಮಟ್ಟಿಗೆ ಬಿಡುವು ನೀಡಿದ್ದ. ನಿನ್ನೆ ಸಾಧಾರಣ ಮಳೆಯಾಗಿದ್ದರೂ ಎಂದಿನ ಅಬ್ಬರವಿರಲಿಲ್ಲ. ಹೀಗಾಗಿ ಕೆಲವು ಕಡೆ ರಸ್ತೆಗಳಲ್ಲಿ ನಿಂತಿದ್ದ ನೀರು ತಗ್ಗಿತ್ತು. ಆದರೆ ಇಷ್ಟಕ್ಕೇ ನಿಂತಿಲ್ಲ. ಇನ್ನು ನಾಲ್ಕು ದಿನ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ. ಇಂದು ಬೆಳಿಗ್ಗೆಯಿಂದಲೇ ದಟ್ಟ ಮೋಡಕವಿದ ವಾತಾವರಣ, ಹನಿ ಮಳೆಯಾಗುತ್ತಿದ್ದು, ಸಂಜೆ ಮತ್ತಷ್ಟು ಬಿರುಸಾಗುವ ಸಾಧ್ಯತೆಯಿದೆ.