ವಯನಾಡು: ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅವಮಾನ ಮಾಡಿದ ಆರೋಪ ಎದುರಾಗಿದೆ. ಅವರನ್ನು ಹೊರಗೆ ನಿಲ್ಲಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಮಲ್ಲಿಕಾರ್ಜುನ ಖರ್ಗೆ ಕೂಡಾ ನಿನ್ನೆ ಪ್ರಿಯಾಂಕ ನಾಮಪತ್ರ ಸಲ್ಲಿಕೆ ವೇಳೆ ವಯನಾಡಿಗೆ ಬಂದಿದ್ದರು. ಈ ವೇಳೆ ಚುನಾವಣಾಧಿಕಾರಿಗಳ ಕಚೇರಿ ಒಳಗೆ ಖರ್ಗೆಯವರನ್ನು ಒಳಗೆ ಬಿಟ್ಟುಕೊಂಡಿಲ್ಲ. ಹೊರಗೆ ಬಾಗಿಲ ಬಳಿಯೇ ನಿಲ್ಲಿಸಲಾಗಿತ್ತು ಎಂಬ ವಿಡಿಯೋವೊಂದು ವೈರಲ್ ಆಗಿದ್ದು, ಇದು ಕಾಂಗ್ರೆಸ್ ನಲ್ಲಿ ದಲಿತ ನಾಯಕನ ಸ್ಥಿತಿ ಎಂದು ಬಿಜೆಪಿ ಟೀಕಿಸಿದೆ.
ಆದರೆ ಖರ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಫೋಟೋದಲ್ಲಿ ಅವರೂ ಪ್ರಿಯಾಂಕ ಜೊತೆಗೆ ಕುಳಿತಿದ್ದರು. ಆದರೆ ಇದು ಒಮ್ಮೆ ಮಾತ್ರ ಎಂದು ಹೇಳಲಾಗಿದೆ. ಬಳಿಕ ಚುನಾವಣಾಧಿಕಾರಿಗಳು 5 ಜನಕ್ಕಿಂತ ಹೆಚ್ಚು ಮಂದಿ ಕೊಠಡಿಯೊಳಗಿರಬಾರದು ಎಂದಿದ್ದಕ್ಕೆ ಖರ್ಗೆ ಹೊರಗೆ ನಿಂತರು ಎನ್ನಲಾಗುತ್ತಿದೆ.
ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಕುಹುಕಗಳು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಲ್ಲಿ ಎಷ್ಟೇ ಹಿರಿಯ ವ್ಯಕ್ತಿಯಾಗಿರಲಿ, ಗಾಂಧಿ ಕುಟುಂಬದ ಮುಂದೆ ಕೈ ಕಟ್ಟಿಕೊಂಡು ನಿಲ್ಲಬೇಕು. ಅದರಲ್ಲೂ ಖರ್ಗೆಯಂತಹ ಹಿರಿಯ, ದಲಿತ ನಾಯಕನಿಗೆ ಮಾಡಿದ ಅವಮಾನವಿದು ಎಂದು ಲೇವಡಿ ಮಾಡಲಾಗುತ್ತಿದೆ.