Select Your Language

Notifications

webdunia
webdunia
webdunia
webdunia

ಗ್ಯಾರಂಟಿಗಳಿಗೆ ಮೀಸಲಿಟ್ಟ ಹಣ ಯಾರದ್ದೋ ಪಾಲಾಗುತ್ತಿದೆ

Chalavadi Narayanaswamy

Krishnaveni K

ಬೆಂಗಳೂರು , ಸೋಮವಾರ, 17 ಫೆಬ್ರವರಿ 2025 (16:02 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಜೆಟ್‍ನಲ್ಲಿ ಮೀಸಲಿಟ್ಟ 52,009 ಕೋಟಿ ರೂ. ಹಣ ಎಲ್ಲಿ ಹೋಗುತ್ತಿದೆ? ಯಾರು ನುಂಗುತ್ತಿದ್ದಾರೆ ಎಂಬುದಕ್ಕೆ ಸರಕಾರ ಉತ್ತರಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗದಿತ ಸಮಯಕ್ಕೆ ಗ್ಯಾರಂಟಿಗಳು ತಲುಪುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಒಳಗಡೆ ಗ್ಯಾರಂಟಿ ಕೊಡಬೇಕೇ ಬೇಡವೇ ಎಂಬ ವಿಚಾರ ಚರ್ಚೆಯಲ್ಲಿದೆ ಎಂದು ವಿಶ್ಲೇಷಿಸಿದರು. ಈ ಕಾರಣದಿಂದ ಜನರಿಗೆ ಅನುಮಾನ ಬರುವಂತಾಗಿದೆ ಎಂದರು.

ದಲಿತರ ಹಣ 25 ಸಾವಿರ ಕೋಟಿಯನ್ನೂ ನುಂಗಿದ್ದೀರಿ. 52 ಸಾವಿರ ಕೋಟಿಯನ್ನು ಬಜೆಟ್‍ನಲ್ಲಿ ಇಟ್ಟಿದ್ದೀರಿ. 6 ತಿಂಗಳಿನಿಂದ ಅಕ್ಕಿ ಕೊಡುವುದಕ್ಕೂ ತಿಲಾಂಜಲಿ ಹಾಡಿದ್ದಾರೆ. ಮನೆ ಒಡತಿಗೆ ಕೊಡುತ್ತಿದ್ದ 2 ಸಾವಿರ ರೂ. ಬರುತ್ತಿಲ್ಲ. ಯುವನಿಧಿ ಮರೀಚಿಕೆಯಾಗಿದೆ; ಅದು ಯಾರಿಗೂ ಸಿಗುತ್ತಿಲ್ಲ ಎಂದು ಟೀಕಿಸಿದರು. ಹಣ ಎಲ್ಲಿ ಹೋಗಿದೆ? ಇದು ಸಕಾಲಕ್ಕೆ ಜನರಿಗೆ ಯಾಕೆ ಸಿಗುತ್ತಿಲ್ಲ? ಎಂದು ಪ್ರಶ್ನೆಯನ್ನು ಮುಂದಿಟ್ಟರು.
 
ಇದೆಲ್ಲದರ ನಡುವೆ ಲೂಟಿ ನಡೆಯುತ್ತಿದೆ. ಇತಿಮಿತಿ ನೋಡಿ ಗ್ಯಾರಂಟಿ ಕೊಡಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ಶಶಿ ತರೂರ್ ಅವರು ಬಂದು ಅಕ್ಕಿ ಕೊಡುವ ಯೋಜನೆ ಜನರನ್ನು ಸೋಂಬೇರಿ ಮಾಡುತ್ತದೆ ಎಂದಿದ್ದಾರೆ. ನೀವು ಕೊಡುವ ಗ್ಯಾರಂಟಿಗಳಿಗೆ ನಿಮ್ಮ ನಾಯಕರ ಸಹಮತ ಇಲ್ಲ ಎಂದಾದರೆ ನಿಮ್ಮದು ಎಂಥ ಗ್ಯಾರಂಟಿ ಎಂದು ಕೇಳಿದರು. ಗ್ಯಾರಂಟಿಗಳು ನಿಮ್ಮ ಪಕ್ಷದ ಮುಖಂಡರಿಗೆ ಪ್ರಶ್ನೆಯಾಗಿದೆ ಎಂದರು.
 
ಪಡಿತರ ಸಾಮಗ್ರಿ ಸೋರಿ ಹೋಗುತ್ತಿದೆ..
ಪಡಿತರ ಸಾಮಗ್ರಿಗಳು ಜನರಿಗೆ ತಲುಪುತ್ತಿಲ್ಲ ಎಂದಾದರೆ, ಸರಕಾರದ ಒಳಗಡೆಯೇ ಸೋರಿ ಹೋಗುತ್ತಿದೆ ಎಂಬುದು ಇದರ ಅರ್ಥ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆಗೆ ಉತ್ತರಿಸಿದರು.
ಗ್ಯಾರಂಟಿಗಳಿಗೆ ಬೇಕಾದ 52 ಸಾವಿರ ಕೋಟಿ ಇಟ್ಟಿದ್ದೇವೆ ಎಂದು ನೀವೇ ಹೇಳುತ್ತೀರಿ. ಲೆಕ್ಕಾಚಾರದ ಪ್ರಕಾರ ಫಲಾನುಭವಿಗಳಿಗೆ ಅಕ್ಕಿ ತಲುಪಬೇಕಿತ್ತು. ಆದರೆ, ಹಾಗೆ ಆಗುತ್ತಿಲ್ಲ. ಹಾಗಿದ್ದರೆ ಎಲ್ಲಿ ಸೋರಿಕೆ ಆಗುತ್ತಿದೆ ಎಂದು ಕೇಳಿದರು. 6 ತಿಂಗಳಿಂದ ಬಂದಿಲ್ಲ ಎಂದಾದ ಮೇಲೆ ನಿಮ್ಮ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲವಲ್ಲ ಎಂದು ಪ್ರಶ್ನೆಯನ್ನೂ ಮುಂದಿಟ್ಟರು.
 
ಕಾಂಗ್ರೆಸ್ಸಿಗರು ಜನರ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ. ಕೊಟ್ಟ ಆಶ್ವಾಸನೆ ವಿಚಾರದಲ್ಲಿ ಜನರಿಗೆ ಮೋಸ- ವಂಚನೆ ಮಾಡಿದ್ದೀರಿ. ಆ ಕಾರಣದಿಂದ ಗ್ಯಾರಂಟಿ ಅನುಷ್ಠಾನ ಆಗುತ್ತಿಲ್ಲ ಎಂದು ಅವರು ವಿಶ್ಲೇಷಿಸಿದರು.

ಅಕ್ಕಿ ಖರೀದಿಸಿದರೆ ಅದನ್ನು ಜನರಿಗೆ ಕೊಡಬೇಕು. ತಗೊಳ್ಳದೆ ಇದ್ದಲ್ಲಿ ಜನರಿಗೆ ಏನಾದರೂ ಸಬೂಬು ಹೇಳಬಹುದೆಂಬ ಚಿಂತನೆ ಸರಕಾರದ್ದು ಇದ್ದಂತಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಸರ್ವರ್ ಡೌನ್, ಲಾರಿ ಟಯರ್ ಪಂಕ್ಚರ್ ಎಂಬಂಥ ಸಬೂಬು ಹೇಳುವ ಸ್ಥಿತಿಗೆ ಸರಕಾರ ತಲುಪಿದೆ ಎಂದು ವ್ಯಂಗ್ಯವಾಡಿದರು.
 
ಮುಖ್ಯಮಂತ್ರಿಗಳು ಇದನ್ನು ಪರಿಶೀಲಿಸಿ 6 ತಿಂಗಳ ಬಾಕಿ ಗ್ಯಾರಂಟಿಯನ್ನು ಜನರಿಗೆ ಕೊಡಬೇಕು ಎಂದು ಅವರು ಆಗ್ರಹಿಸಿದರು. ಬಜೆಟ್‍ನಲ್ಲಿ ಸತ್ಯ ಇತ್ತೇ ಸುಳ್ಳು ಇತ್ತೇ ಎಂಬುದು ಜನರಿಗೆ ಈಗ ಅರ್ಥವಾಗುತ್ತಿದೆ ಎಂದು ಅವರು ತಿಳಿಸಿದರು. ಕಳೆದ ಬಜೆಟ್‍ನಲ್ಲಿ ಶೇ 41- 45ರಷ್ಟು ಹಣ ಈಗಲೂ ಖರ್ಚಾಗಿಲ್ಲ; ನೀವು ಮೊದಲೇ ಕಳಪೆ ಬಜೆಟ್ ಕೊಟ್ಟಿದ್ದೀರಿ. ಜನರಿಗೂ ಅದು ತಲುಪಿಲ್ಲ ಎಂದು ಟೀಕಿಸಿದರು.
 
ಚಡ್ಡಿ ಬಿಟ್ಟು ಬೇರೇನೂ ಉಳಿದಿಲ್ಲ
ದೆಹಲಿಯ ಜನರು ಕಾಂಗ್ರೆಸ್ಸಿಗೆ ಸೋಲಿನ ಮೂಲಕ ಒಳ್ಳೆಯ ಪಾಠ ಕಲಿಸಿದ್ದಾರೆ. ಅವರಿಗೆ ಕೃತಜ್ಞತೆಗಳು ಎಂದು ತಿಳಿಸಿದರು. ಛಲವಾದಿ ನಾರಾಯಣಸ್ವಾಮಿ ದಲಿತರು; ಬಿಜೆಪಿ, ಆರೆಸ್ಸೆಸ್‍ನವರು ತಲೆ ಮೇಲೆ ಚಡ್ಡಿ ಹೊರಿಸಿದರೆಂದು ಕಾಂಗ್ರೆಸ್‍ನವರು ಸುಳ್ಳು ಹೇಳಿ ಟ್ರೋಲ್ ಮಾಡುತ್ತಿದ್ದರು. ಅವರು ಚಡ್ಡಿಯನ್ನು ಸುಟ್ಟಿದ್ದರು. ನಾನು ಆ ಕಾಲದಲ್ಲಿ ಮುಖ್ಯಮಂತ್ರಿಗಳಿಗೆ ಪ್ರತಿಭಟನೆ ರೀತಿಯಲ್ಲಿ ಚಡ್ಡಿ ಒಯ್ದು ಕೊಟ್ಟದ್ದು ನಿಜ. ಅದನ್ನು ಅವರ ಮನೆಗೆ ತಲುಪಿಸಿದ್ದೆ ಎಂದು ತಿಳಿಸಿದರು. ದೆಹಲಿ ಚುನಾವಣೆ ಫಲಿತಾಂಶ ನೋಡಿದರೆ ನಾನು ಕೊಟ್ಟ ಚಡ್ಡಿ ಬಿಟ್ಟು ಬೇರೇನೂ ಅವರ ಬಳಿ ಉಳಿದಿಲ್ಲ ಎಂದು ಹೇಳಿದರು.

ಪ್ರಧಾನಿಯವರಿಗೆ ಒಳ್ಳೆಯ ಹೆಸರು ಬಾರದಂತೆ ಇಲ್ಲಿನ ಸರಕಾರ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸದೆ ತಡೆಯುತ್ತಿದೆ ಎಂದು ಇದೇವೇಳೆ ಆಕ್ಷೇಪಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

Karnataka Budget: ದಾಖಲೆಯ 16ನೇ ಬಜೆಟ್‌ ಮಂಡನೆಗೆ ಸಿದ್ದರಾಮಯ್ಯ ಸಿದ್ಧತೆ