Select Your Language

Notifications

webdunia
webdunia
webdunia
webdunia

Karnataka: ಭಾರತೀಯ ಸೇನೆಗಾಗಿ ಬಿಜೆಪಿಯಿಂದ ಪಕ್ಷಾತೀತ ತಿರಂಗಾ ಯಾತ್ರೆ

R Ashok

Krishnaveni K

ಬೆಂಗಳೂರು , ಮಂಗಳವಾರ, 13 ಮೇ 2025 (15:46 IST)
ಬೆಂಗಳೂರು: ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಅಡಿಯಲ್ಲಿ ಆಪರೇಷನ್ ಸಿಂದೂರದ ಜೊತೆ ನಾವಿದ್ದೇವೆ; ಭಾರತದ ಸೇನೆ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸಂದೇಶ ನೀಡುವ ಸಲುವಾಗಿ 15-5-2025 ಗುರುವಾರ ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಲ್ಲೇಶ್ವರ ಮಂತ್ರಿಮಾಲ್‍ನ ಸಂಪಿಗೆ ರಸ್ತೆಯ ಸಿರೂರು ಆಟದ ಮೈದಾನದಿಂದ ಪ್ರಾರಂಭವಾಗಿ 18ನೇ ಕ್ರಾಸ್ ವರೆಗೂ ರಾಷ್ಟ್ರಧ್ವಜದೊಂದಿಗೆ ತಿರಂಗಾ ಯಾತ್ರೆ ಜರುಗಲಿದೆ. ಪಕ್ಷತೀತವಾಗಿ ನಡೆಯುವ ಈ ಯಾತ್ರೆಯಲ್ಲಿ ಪಕ್ಷದ ಯಾವುದೇ ಬ್ಯಾನರ್‍ಗಳು ಇರುವುದಿಲ್ಲ. ಈ ಯಾತ್ರೆಯಲ್ಲಿ ವೈದ್ಯರು, ಇಂಜಿನಿಯರ್‍ಗಳು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಎಲ್ಲರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮೇ 16 ಮತ್ತು 17 ರಂದು ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಮೇ 18 ರಿಂದ 23 ರವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ತಿರಂಗಾ ಯಾತ್ರೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು. ಪ್ರತಿಹಳ್ಳಿಗಳಲ್ಲಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪಕ್ಷದ ಬ್ಯಾನರ್ ಇಲ್ಲದೆ ಯಾತ್ರೆಯನ್ನು ಕೈಗೊಳ್ಳಲು ನಮ್ಮ ಕಾರ್ಯಕರ್ತರಿಗೆ ಸೂಚನೆಯನ್ನು ಕೊಡಲಾಗಿದೆ ಎಂದು ವಿವರಿಸಿದರು.

ಭಾರತದ ತಾಯಂದಿರ ಸಿಂದೂರ ಅಳಿಸಿದರೆ ಏನು ಆಗುತ್ತದೆ ಎಂಬುದನ್ನು ನಮ್ಮ ಸೇನೆಯು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ಉಗ್ರರ ಸ್ಥಳಗಳನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನವು ಕೊನೆಗೆ ಈ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಂಗಲಾಚುವ ಸ್ಥಿತಿಗೆ ನಮ್ಮ ಸೈನಿಕರು ತಂದಿದ್ದಾರೆ. ಭಾರತ ಎಂದೂ ಉಗ್ರವಾದವನ್ನು ಸಹಿಸಲ್ಲ ಅನ್ನುವ ಸಂದೇಶವನ್ನು ಇಡೀ ಪ್ರಪಂಚಕ್ಕೆ ನೀಡಿರುತ್ತಾರೆ ಎಂದು ವಿಶ್ಲೇಷಿಸಿದರು.

ಸಿಂಧೂ ನದಿ ನೀರಿನ ವಿಚಾರವಾಗಿ ಈ ಹಿಂದೆ ಶೇ 90% ನೀರು ಪಾಕಿಸ್ತಾನಕ್ಕೆ ಶೇ 10% ಮಾತ್ರ ಭಾರತಕ್ಕೆ ಎಂಬ ಒಪ್ಪಂದವನ್ನು ಪ್ರಧಾನ ಮೋದಿ ಜೀ ರವರು ರದ್ದುಪಡಿಸಿರುವುದು ಒಂದು ಸಾಧನೆಯಾಗಿದೆ. ನ್ಯೂಕ್ಲಿಯರ್ ಬಾಂಬ್ ಬೆದರಿಕೆಗೆ ನಾವು ಹೆದರುವುದಿಲ್ಲ ಎಂಬ ಸಂದೇಶವನ್ನು ನಮ್ಮ ಪ್ರಧಾನಿಯವರು ಪಾಕಿಸ್ತಾನಕ್ಕೆ ನೀಡಿರುತ್ತಾರೆ ಎಂದು ಅವರು ತಿಳಿಸಿದರು.

ನಮ್ಮ ಸೈನಿಕರು ದಾಳಿ ಮಾಡಿರುವುದಕ್ಕೆ ಸಾಕ್ಷಿ ಇದೆಯೇ ಎಂದು ಪ್ರಶ್ನಿಸುತ್ತಿದ್ದರು. ಅಲ್ಲಿನ ಸೈನಿಕರು ಮತ್ತು ಭಯೋತ್ಪಾದಕರು ಎಷ್ಟು ಜನ ಹತರಾಗಿದ್ದಾರೆ ಎಂದು ಪಾಕಿಸ್ತಾನವು ಈಗಾಗಲೇ ಒಪ್ಪಿಕೊಂಡಿದೆ. ನಮ್ಮ ಸೇನಾ ಅಧಿಕಾರಿಗಳೇ ಪತ್ರಿಕಾಗೋಷ್ಠಿ ನೀಡಿ, ಪಾಕಿಸ್ತಾನದ ಮೇಲೆ  ದಾಳಿ ಮಾಡಿರುವುದಕ್ಕೆ ಸಾಕ್ಷಿ ಸಮೇತ ಉತ್ತರ ನೀಡಿದ್ದಾರೆ. ಆದರೂ ಪಾಕಿಸ್ತಾನ ಜಿಂದಾಬಾದ್ ಎಂಬುವವರಿಗೆ ನಂಬಲು ಆಗುತಿಲ್ಲ ಮತ್ತು ಭಾರತದ ಕಾರ್ಯಾಚರಣೆಯನ್ನು ಸಹಿಸಲು ಆಗುತ್ತಿಲ್ಲ ಎಂದು ತಿಳಿಸಿದರು.
 
ಇಂದು ನಮ್ಮ ಸೈನಿಕರು ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ನಮ್ಮದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ನಮ್ಮ ಪ್ರಧಾನ ಮೋದಿ ಜೀ ರವರು ಸಹ ಹೇಳಿದ್ದಾರೆ. ಪಾಕಿಸ್ತಾನ ಅಕ್ರಮಿತ ಕಾಶ್ಮೀರವನ್ನು ನಾವು ವಾಪಸ್ ಪಡೆಯುತ್ತೇವೆ ಹಾಗೂ ಸಿಂಧೂ ನದಿಯ ಯಾವುದೇ ಒಪ್ಪಂದವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದರು. ಪಾಕಿಸ್ತಾನದ ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿರುವ ನಮ್ಮ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಈ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 
 
ಕಾಂಗ್ರೆಸ್ಸಿನವರು ಒಡಕು ಮಾತು ನಿಲ್ಲಿಸಲು ಆಗ್ರಹ
ದೇಶವು ಒಗ್ಗಟ್ಟಿನಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ಸಿನವರು ಮೊದಲು ಒಡಕು ಮಾತುಗಳನ್ನು ನಿಲ್ಲಿಸಬೇಕು. ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಮೊದಲು ಕಾಂಗ್ರೆಸ್ ನವರು ಮೊದಲು ಯುದ್ಧ ಬೇಡ, ಅವಶ್ಯಕತೆ ಇದೆಯೇ ಎಂದು ಹೇಳಿದರು; ಆಪರೇಷನ್ ಸಿಂದೂರ ಪ್ರಾರಂಭವಾದ ಮೇಲೆ ಶಾಂತಿ ಸ್ಥಾಪನೆ ಮಾಡಬೇಕೆಂದು ಹೇಳಿಕೆ ನೀಡಿದರು: ಆಪರೇಷನ್ ಸಿಂದೂರ ಸಂಬಂಧ ಕದನ ವಿರಾಮವಾದ ಮೇಲೆ ಏತಕ್ಕೆ ಯುದ್ಧ ನಿಲ್ಲಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಆರ್. ಅಶೋಕ್ ಅವರು ಟೀಕಿಸಿದರು.
ಕಾಂಗ್ರೆಸ್ ಹೇಳಿಕೆಯಲ್ಲಿನ ನಿಲುವು ಮತ್ತು ಉದ್ದೇಶ ಏನು ಎಂಬುದು ಮೊದಲು ತಿಳಿಸಬೇಕು. ಪಾಕಿಸ್ತಾನವು ಭಯೋತ್ಪಾದನೆ ಮೂಲಕ ಭಾರತದ ಮೇಲೆ ದಾಳಿ ಮಾಡಿರುವುದಕ್ಕೆ ತಕ್ಕ ಉತ್ತರ ನೀಡುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಅಧಿವೇಶನ ಕರೆಯಬೇಕು, ಚರ್ಚೆಯಾಗಬೇಕು ಎಂದು ನೀಡುವ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

Nuclear leak: ಪಾಕಿಸ್ತಾನದಲ್ಲಿ ಈಗ ಎಲ್ಲರಿಗೂ ವಾಂತಿ, ತಲೆನೋವು: ಎಲ್ಲಾ ಭಾರತೀಯ ಸೇನೆ ಇಫೆಕ್ಟ್