Publish Date: Thu, 23 Apr 2026 (13:22 IST)
Updated Date: Thu, 23 Apr 2026 (13:28 IST)
ಬೆಂಗಳೂರು: ಇಡೀ ವಿಶ್ವವೇ ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಜೀ ಅವರನ್ನು ಭಯೋತ್ಪಾದಕರೆಂದು ಹೇಳಿದ್ದು ಬಿಜೆಪಿ ಮಾತ್ರವಲ್ಲದೇ ಇಡೀ ದೇಶ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಉಗ್ರವಾದಿ ಎಂದು ಹೇಳಿದ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಖರ್ಗೆಯವರು ಮತ್ತು ಕಾಂಗ್ರೆಸ್ಸಿಗೆ ಪ್ರಧಾನಿಯವರ ಜನಪ್ರಿಯತೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು. ವಿಶ್ವದ 25ಕ್ಕೂ ಹೆಚ್ಚು ರಾಷ್ಟ್ರಗಳು ಮೋದಿಜೀ ಅವರಿಗೆ ತಮ್ಮ ದೇಶದ ಅತ್ಯುನ್ನತ ಗೌರವ ನೀಡಿವೆ ಎಂದು ಗಮನ ಸೆಳೆದರು. ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಇದೇವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಕಾಲದಲ್ಲಿ ಸಂಬಳ ಕೊಡುತ್ತಿಲ್ಲ ಎಂದು ಟೀಕಿಸಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಯಾವ ಕಡೆ ಸಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರ ದೇಶವಿರೋಧಿ ಹೇಳಿಕೆ- ಶೋಭಾ ಕರಂದ್ಲಾಜೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಿದೇಶದಲ್ಲೂ ದೇಶವಿರೋಧಿ ಹೇಳಿಕೆ ನೀಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಟೀಕಿಸಿದರು. ಖರ್ಗೆ ಮತ್ತು ರಾಹುಲ್ ಗಾಂಧಿಯವರು ಭಾರತ ವಿರೋಧಿಗಳು ಎಂದು ಆಕ್ಷೇಪಿಸಿದರು.
ಇವರು ವಿದೇಶಿ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಬ್ಬರು ಜಾರ್ಜ್ ಸೊರೊಸ್ ಏಜೆಂಟರು ಎಂದು ಟೀಕಿಸಿದರು. ಅವರ ಮಾನಸಿಕತೆಗೆ ತಕ್ಕಂತೆ ಇವರು ಭಾರತದಲ್ಲಿ ಕುಣಿಯುತ್ತಿದ್ದಾರೆ ಎಂದು ಖಂಡಿಸಿದರು.
ದೇಶಕ್ಕೆ ಅವಮಾನ- ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಖರ್ಗೆಯವರ ಮಾತು ಅಕ್ಷಮ್ಯ ಅಪರಾಧ ಮತ್ತು ದೇಶಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದವರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಬ್ರದರ್ಸ್ ಎಂದು ಕರೆದಿದ್ದಾರೆÉ ಎಂದು ಆಕ್ಷೇಪಿಸಿದರು.
ವಿಧಾನಸೌಧದಲ್ಲಿ ಖರ್ಗೆಯವರ ಬಲಗೈ ಬಂಟ, ರಾಜ್ಯಸಭಾ ಸದಸ್ಯ ಪಾಕಿಸ್ತಾನ ಜಿಂದಾಬಾದ್ ಎಂದಿದ್ದರು. ಇದನ್ನು ಖರ್ಗೆಯವರು ಖಂಡಿಸಿರಲಿಲ್ಲ ಎಂದು ದೂರಿದರು. ಮುಂಬೈಯಲ್ಲಿ ಹೊಟೇಲ್ ಮೇಲೆ ಭಯೋತ್ಪಾದಕರ ದಾಳಿ ಆದಾಗ ಕಾಂಗ್ರೆಸ್ಸಿನವರು ಕೈಕಟ್ಟಿ ಕೂತಿದ್ದರು ಎಂದು ಗಮನ ಸೆಳೆದರು.
ವರಿಷ್ಠರು ಈ ಮಾತು ಹೇಳಿಸಿದರೇ?: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಖರ್ಗೆಯವರು ಈ ಮಾತನಾಡಿದರೇ ಅಥವಾ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಖರ್ಗೆಯವರಿಂದ ಈ ಮಾತನ್ನು ಹೇಳಿಸಿದರೇ ಎಂದು ಪ್ರಶ್ನಿಸಿದರು.
ಬಿಜೆಪಿ, ಆರೆಸ್ಸೆಸ್ ಅನ್ನು ಅವರು ವಿಷಸರ್ಪಕ್ಕೆ ಹೋಲಿಸಿ ಕೊಲ್ಲಲು ಪ್ರಚೋದಿಸುವ ಹೇಳಿಕೆ ನೀಡಿದ್ದರು. ಪ್ರಧಾನಿಯವರು ಭಯೋತ್ಪಾದಕರು ಎಂಬ ಹೇಳಿಕೆ ನಿಮ್ಮ ಮುತ್ಸದ್ಧಿತನವೇ ಎಂದು ಕೇಳಿದರು.
ಸೋನಿಯಾರನ್ನು ಮೆಚ್ಚಿಸಲು ಹೊರಟಿದ್ದಾರಾ? : ಗೋವಿಂದ ಕಾರಜೋಳ
ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಖರ್ಗೆ ಮತ್ತು ಅವರ ಮಗ, ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಹೀಗೆ ಮಾತನಾಡುತ್ತಿದ್ದಾರಾ ಎಂದು ಕೇಳಿದರು. ಹಿಂದೆ ವಿಷಸರ್ಪಕ್ಕೆ ಹೋಲಿಸಿದ್ದರು ಎಂದು ಖಂಡಿಸಿದರು. ಪ್ರಧಾನಿಯವರನ್ನು ಹೀಗೆ ಹೋಲಿಸಿ ಮಾತನಾಡಿದ್ದರಿಂದ ಕಾಂಗ್ರೆಸ್ಸಿಗೆ 140 ಕೋಟಿ ಜನರ ಶಾಪ ತಟ್ಟಲಿದೆ. ಅದರಿಂದ ಕಾಂಗ್ರೆಸ್ ನಶಿಸಿ ಹೋಗಲಿದೆ ಎಂದು ನುಡಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ