Select Your Language

Notifications

webdunia
webdunia
webdunia
webdunia

ಪಿಎಸ್ ಐ ಪರೀಕ್ಷೆ ಮುಂದೂಡಿಕೆ ಮಾಡಿ: ಗೃಹಸಚಿವ ಪರಮೇಶ್ವರ್ ಗೆ ಬಿಜೆಪಿ ಬೇಡಿಕೆ

BJP Karnataka

Krishnaveni K

ಬೆಂಗಳೂರು , ಮಂಗಳವಾರ, 10 ಸೆಪ್ಟಂಬರ್ 2024 (15:43 IST)
ಬೆಂಗಳೂರು: ಪಿಎಸ್‍ಐ ಪರೀಕ್ಷೆಯನ್ನು ಮುಂದೂಡಲು ಒತ್ತಾಯಿಸಿದ್ದು, ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ವಹಿಸುವ ಪ್ರಯತ್ನ ಮಾಡುವುದಾಗಿ ಗೃಹ ಸಚಿವರು ತಿಳಿಸಿದ್ದಾಗಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಹಾಗೂ ಪರೀಕ್ಷಾರ್ಥಿಗಳು ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬೆಂಗಳೂರಿನ ಸದಾಶಿವನಗರದ ಸರಕಾರಿ ನಿವಾಸಕ್ಕೆ ಭೇಟಿ ನೀಡಿ ಪಿಎಸ್‍ಐ ಪರೀಕ್ಷೆಯನ್ನು ಮುಂದೂಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಪರೀಕ್ಷೆ ಮುಂದೂಡುವ ವಿಶ್ವಾಸವಿದೆ ಎಂದ ಅವರು, 402 ಹುದ್ದೆ ಪೈಕಿ 102 ಜನರು ಹಾಲ್ ಟಿಕೆಟ್ ಹೊಂದಿದವರು ಯುಪಿಎಸ್ಸಿ ಮೈನ್ಸ್ ಗೆ ಆಯ್ಕೆಯಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ. ಯುಪಿಎಸ್ಸಿ ಮೈನ್ಸ್ ಗೆ ಆಯ್ಕೆಯಾದವರು ಪಿಎಸ್‍ಐ ಪರೀಕ್ಷೆಯಲ್ಲಿ 100ಕ್ಕೆ ನೂರು ಆಯ್ಕೆ ಆಗಿಯೇ ಆಗುತ್ತಾರೆ. ಅವರಿಗೆ ಅನ್ಯಾಯ ಆಗಬಾರದು ಎಂದು ನುಡಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಲಕ್ಷ್ಯದಿಂದ, ಬೇಜವಾಬ್ದಾರಿಯಿಂದ ಒಂದೇ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಇದನ್ನು ತಕ್ಷಣ ಸರಿಪಡಿಸಲು ಗೃಹ ಸಚಿವರಲ್ಲಿ ಕೋರಿದ್ದೇವೆ. ನ್ಯಾಯಬದ್ಧ ಕೋರಿಕೆಯನ್ನು ಗೃಹ ಸಚಿವರು ಈಡೇರಿಸುವ ವಿಶ್ವಾಸವನ್ನು ಹೊಂದಿರುವುದಾಗಿ ಪ್ರಶ್ನೆಗೆ ಉತ್ತರಿಸಿದರು.

ಇ.ಡಿ.ಯವರು ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರೇ ಸೂತ್ರಧಾರಿ ಎಂದು ದೋಷಾರೋಪ ಪಟ್ಟಿ ಸಲ್ಲಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಚಂದ್ರಶೇಖರ್ ಅವರು ತಮ್ಮ ಡೆತ್ ನೋಟಿನಲ್ಲಿ ಈ ಕುರಿತು ಸ್ಪಷ್ಟವಾಗಿ ತಿಳಿಸಿದ್ದರು. ಅಂದಿನ ಸಚಿವ ನಾಗೇಂದ್ರರ ಮಾರ್ಗದರ್ಶನ ಮತ್ತು ನಿರ್ಣಯದ ಪ್ರಕಾರ ಹಣ ವರ್ಗಾವಣೆ ನಡೆದಿರುವುದು, ಬೇರೆ ಬೇರೆ ಖಾತೆಗೆ ವರ್ಗಾಯಿಸಿದ್ದು ಮತ್ತು ತೆಲಂಗಾಣ, ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದು ಸ್ಪಷ್ಟವಾಗಿ ಗೊತ್ತಾಗಿದೆ. ಅವರ ಜೊತೆ ಸಹಚರರೂ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಸಿಎಂ ಹೊಣೆ ಹೊರಬೇಕೆಂಬ ವಿಚಾರದಲ್ಲಿ ಅನುಮಾನವೇ ಇಲ್ಲ. ಖಜಾನೆಯಿಂದ ನೇರವಾಗಿ ಹಣ ವರ್ಗಾವಣೆ ಆಗಿದೆ. ಹಣಕಾಸು ಇಲಾಖೆ ಸಹಕಾರ ಇಲ್ಲದೇ ಇದು ಆಗಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಬಿಜೆಪಿ ಕಚೇರಿಯನ್ನು ಭಯೋತ್ಪಾದಕರು ಟಾರ್ಗೆಟ್ ಮಾಡಿದ್ದ ಬಗೆಗಿನ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಕಾಂಗ್ರೆಸ್ ಸರಕಾರ ಭಯೋತ್ಪಾದಕರನ್ನು ಸದೆಬಡಿಯಬೇಕು. ಇವರ ಕುರಿತು ಮೃದು ಧೋರಣೆ ತೋರಿಸಬಾರದು; ತುಷ್ಟೀಕರಣ ಮಾಡದಿರಿ ಎಂದು ಒತ್ತಾಯಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿರೋದು ಅಸಮರ್ಥ ಗೃಹಸಚಿವರು: ನಿವೃತ್ತ ಡಿಜಿಪಿ, ಬಿಜೆಪಿ ನಾಯಕ ಭಾಸ್ಕರ್ ರಾವ್