ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಇದೀಗ ಮಾಜಿ ಸಚಿವ ನಾಗೇಂದ್ರ ಪಾತ್ರದ ಬಗ್ಗೆ ಮಹತ್ವದ ಹೇಳಿಕೆ ನೀಡಿದೆ.
ವಾಲ್ಮೀಕಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಅರೋಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿದ್ದ ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡ ಮಾಜಿ ಸಚಿವ ನಾಗೇಂದ್ರಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಹಣಕಾಸಿನ ಅವ್ಯವಹಾರವನ್ನು ಇಡಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿತ್ತು.
ಇದೀಗ ಇಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ನಾಗೇಂದ್ರ ಪಾತ್ರವಿರುವುದು ನಿಜವೆಂದು ಹೇಳಿದ್ದಾರೆ. ನಾಗೇಂದ್ರ ಅಣತಿಯಂತೇ ಹಣಕಾಸಿನ ವ್ಯವಹಾರ ನಡೆದಿದೆ ಎಂದು ಇಡಿ ಹೇಳಿಕೆ ನೀಡಿದೆ. ತನಿಖೆ ನಡೆಸಿದ ಇಡಿ ಅಧಿಕಾರಿಗಳು ಇದೀಗ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ನಾಗೇಂದ್ರ ಪಾತ್ರದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
ಹಗರಣದಲ್ಲಿ ನಾಗೇಂದ್ರ ಪ್ರಮುಖ ಆರೋಪಿ. ಅವರು ಹೈದರಾಬಾದ್ ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಎಂಡಿ ಸತ್ಯನಾರಾಯಣ ಜೊತೆ ಸ್ನೇಹ ಹೊಂದಿದ್ದರು. ನಾಗೇಂದ್ರ ಅಣತಿಯಂತೆ ಹಣಕಾಸಿನ ವ್ಯವಹಾರ ನಡೆದಿದೆ. 21 ಕೋಟಿ ರೂ. ಹಣವನ್ನು ಲೋಕಸಭೆ ಚುನಾವಣೆಗೆ ಬಳಸಲಾಗಿದೆ ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ. ನಾಗೇಂದ್ರ ಸೇರಿ ಐವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.