Publish Date: Sat, 01 Oct 2022 (14:02 IST)
Updated Date: Sat, 01 Oct 2022 (14:13 IST)
ಪತ್ರಕರ್ತನ ಸೋಗಿನಲ್ಲಿ ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣಕ್ಕಾಗಿ ಬೇಡಿಕೆಯಿಟ್ಟು, ಬೆದರಿಕೆಯೊಡ್ಡಿದ್ದ ಆರೋಪದಡಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು ನಾಲ್ವರನ್ನು ತುಮಕೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
10 ಲಕ್ಷ ರೂ. ಸಾಲ ಕೊಡಿಸಲು 4 ಲಕ್ಷ ಕಮಿಷನ್ ಹಣ ಕೊಡಬೇಕೇಂದು ದೀಪಿಕಾ, ಪ್ರದೀಪ್ ಪಾವಗಡಗೆ ಬೇಡಿಕೆ ಇಟ್ಟಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಪ್ರದೀಪ್, ದೀಪಿಕಾ ಮೊಬೈಲ್ನಲ್ಲಿ ಮಾತನಾಡಿದ್ದ ಆಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದ. ಇದೇ ಆಡಿಯೋ ಇಟ್ಟುಕೊಂಡು ಪಾಲಿಕೆ ಸಿಬ್ಬಂದಿ ದೀಪಿಕಾಗೆ 4 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ.
ತನ್ನ ಬಳಿಯಿದ್ದ ಮೂವರು ಯುವತಿಯರನ್ನು ಬಿಟ್ಟು, ನಾವು ಆರ್ಟಿಐ ಕಾರ್ಯಕರ್ತರು ನೀವು ಹಣ ಕೊಟ್ಟಿಲ್ಲ ಅಂದ್ರೆ, ನಿಮ್ಮನ್ನ ಕೆಲಸದಿಂದ ವಜಾಗೊಳಿಸುವಂತೆ ಮಾಡುತ್ತೇವೆ ಎಂದು 4 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಡಲಿಲ್ಲ ಅಂದ್ರೆ ತನ್ನ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸೋದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ತನ್ನ ಜೊತೆ ಒಂದು ರಾತ್ರಿ ಕಳೆಯುವಂತೆ ಆ ಸಿಬ್ಬಂದಿಗೆ ಬೆದರಿಕೆ ಇಟ್ಟಿರುವ ಆರೋಪ ಪ್ರದೀಪ್ ಪಾವಗಡ ವಿರುದ್ಧ ಕೇಳಿಬಂದಿದೆ.
ಯಾವಾಗ ಹಣ ಕೊಡಲ್ಲ ಅಂತ ಸಿಬ್ಬಂದಿ ಪಟ್ಟು ಹಿಡಿದಾಗ, ಪಾಲಿಕೆ ಕಚೇರಿಯ ಕೊಠಡಿಯಲ್ಲಿ ದೀಪಿಕಾರನ್ನು ಕೂಡಿ ಹಾಕಿ ಹಣ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ಕೂಡಲೇ ಪಾಲಿಕೆ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಹಣ ವಸೂಲಿಗೆ ಬಂದಿದ್ದ ಪ್ರದೀಪ್ ಪಾವಗಡ ಹಾಗೂ ಆತನ ಜೊತೆಯಿದ್ದ ಮೂವರು ಯುವತಿಯರಿಗೆ ಪಾಲಿಕೆಯ ಮಧ್ಯವರ್ತಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಚಪ್ಪಲಿಯಿಂದ ಮಂಜು ಪಾವಗಡ ಸಹೋದರನಿಗೆ ಪಾಲಕೆ ಮಧ್ಯವರ್ತಿಗಳು ಥಳಿಸಿದ್ದಾರೆ. ಕೂಡಲೇ ತುಮಕೂರು ನಗರ ಠಾಣೆ ಪೊಲೀಸರಿಗೆ ನಾಲ್ವರನ್ನು ಒಪ್ಪಿಸಿದ್ದಾರೆ. ಸದ್ಯ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.