ಬೆಂಗಳೂರು: ತುಮಕೂರಿನ ಪ್ರಭಾವಿ ರಾಜಕಾರಣಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಚುನಾವಣಾ ರಾಜಕಾರಣಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಚುನಾವಣಾ ರಾಜಕಾರಣದಿಂದ ಮಾತ್ರ ವಿರಾಮ ಪಡೆಯುತ್ತೇನೆ. ಆದರೆ, 'ಚುನಾವಣೆಗೆ ನಿಲ್ಲದೆ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತೇನೆ. ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಮುಂದುವರೆಯುವೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಬಾಂಬ್ ಸಿಡಿಸಿದ್ದ ಕಾಂಗ್ರೆಸ್‌ನ ಪ್ರಭಾವಿ ಸಚಿವರಾದ ಕೆ.ಎನ್.ರಾಜಣ್ಣ ದಿಢೀರ್ ರಾಜಕೀಯ ನಿವೃತ್ತಿ ಘೋಷಿಸುವ ಮೂಲಕ ಶಾಕ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದ ರಾಜಣ್ಣ ಈಗ ದಿಢೀರ್ ರಾಜಕೀಯದಿಂದ ದೂರ ಸರಿಯುವ ಮಾತುಗಳನ್ನಾಡಿರುವುದು ಅಚ್ಚರಿ ಮೂಡಿಸಿದೆ.
ತನಗೆ ಈಗಾಗಲೇ 75 ವರ್ಷ ಆಗಿದೆ. ಮುಂದಿನ ವಿಧಾನಸಭೆ ಚುನಾವಣೆ ಆಗುವಾಗ 78 ವರ್ಷ ತುಂಬಲಿದೆ. ಚುನಾವಣೆಗೆ ನಿಂತು ಗೆದ್ದರೂ ಆರೋಗ್ಯದ ದೃಷ್ಟಿಯಿಂದ ಜನರ ಸೇವೆ ಮಾಡುವುದಕ್ಕೆ ಆಗುವುದಿಲ್ಲ ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊದಲಿದ್ದೇನೆ ಎಂದು ಮೈಸೂರಿನಲ್ಲಿ ಅವರು ಇಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ನೀಡಬೇಕು ಎನ್ನೋದು ನನ್ನ ಅಭಿಪ್ರಾಯ. ನನಗೆ ವಯಸ್ಸಾಗುವ ಕಾರಣ ಚುನಾವಣಾ ರಾಜಕೀಯ ಕಷ್ಟ. ಹಾಗಾಗಿ ಚುನಾವಣೆ ರಾಜಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಸಾಧನ ಸಮಾವೇಶ ಹಿನ್ನೆಲೆ ಯಾವ ಸಾಧನೆ ಮಾಡಿ ಸಮಾವೇಶ ಮಾಡ್ತಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ಒಂದು ವಿರೋಧ ಪಕ್ಷವಾಗಿ ಟೀಕೆ ಮಾಡಬೇಕು. ಹಾಗಾಗಿ ಟೀಕೆ ಮಾಡ್ತಿದ್ದಾರೆ. ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದರು.