ಬೆಂಗಳೂರು: ರಾಜ್ಯದ 2025-26ರ ಬಜೆಟ್‍ನಲ್ಲಿ ಪ್ರತಿ ಶಾಸಕರ ವಿಧಾನಸಭಾ ಮತ ಕ್ಷೇತ್ರಗಳಿಗೆ ಶಾಸಕರ ಕ್ಷೇತ್ರಾಭಿವೃದ್ಧಿಗೆ ಈಗಿರುವ ಅನುದಾನಕ್ಕೆ 5 ಕೋಟಿ ಹೆಚ್ಚುವರಿಯಾಗಿ ಸೇರಿಸಿ ಪ್ರಕಟಿಸುವಂತೆ ಬಿಜೆಪಿ- ಜೆಡಿಎಸ್ ಶಾಸಕರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಂದು ಬಿಜೆಪಿ- ಜೆಡಿಎಸ್ ಶಾಸಕರ ನಿಯೋಗವು ಭೇಟಿ ಮಾಡಿ ಈ ಕುರಿತ ಮನವಿ ಸಲ್ಲಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ್ ಅವರು ಸಹಿ ಮಾಡಿದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಹೆಚ್ಚುವರಿ ಅನುದಾನವನ್ನು ನಾಳೆ ಮಂಡಿಸುವ ರಾಜ್ಯದ 2025-26ರ ಆಯವ್ಯಯ ಪತ್ರದಲ್ಲಿ ಘೋಷಿಸುವಂತೆ ಮನವಿ ಮಾಡಿದ್ದಾರೆ. ನಮ್ಮೆಲ್ಲರ ಈ ವಿಧಾನಸಭಾ ಕ್ಷೇತ್ರಗಳ ಮೂಲಭೂತ ಸೌಕರ್ಯದ ನಿರ್ಮಾಣ ಕಾರ್ಯಗಳಿಗೆ, ರಸ್ತೆ ನಿರ್ಮಾಣ, ಮೂಲಭೂತ ಅಭಿವೃದ್ಧಿ ಸೌಕರ್ಯಗಳಿಗೆ ಎಂದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ. 50 ಕೋಟಿ ಅನುದಾನವನ್ನು ಇದೇ ಬಜೆಟ್‍ನಲ್ಲಿ ಘೋಷಿಸಿ ಒದಗಿಸಬೇಕೆಂದು ವಿನಂತಿಸಲಾಗಿದೆ.