Publish Date: Sun, 19 Mar 2023 (12:30 IST)
Updated Date: Sun, 19 Mar 2023 (12:21 IST)
ಬೆಂಗಳೂರು : ಪತ್ರಕರ್ತ ಪ್ರಸಾದ್ ಹೆಗ್ಡೆ (45) ಶನಿವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಿರಸಿಯ ಸದ್ಗತಿ ನೆಮ್ಮದಿ ಕುಟೀರದಲ್ಲಿ ನೆರವೇರಲಿದೆ.
ಮೂಲತಃ ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಬೆಳಗುಂದ್ಲಿಯವರಾದ ಪ್ರಸಾದ್ ಹೆಗ್ಡೆ ಪ್ರಸ್ತುತ ರಾಜ್ ನ್ಯೂಸ್ ಔಟ್ ಪುಟ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ್ದ ಪ್ರಸಾದ್, ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು.
ಮೈಸೂರಿನ ಹಿರಿಯ ಕಲಾವಿದರು, ಸಾಹಿತಿಗಳ ಪ್ರಭಾವಕ್ಕೆ ಒಳಗಾಗಿದ್ದ ಪ್ರಸಾದ್ ಹೆಗ್ಡೆ, ರಂಗಭೂಮಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಇಚ್ಛೆ ಹೊಂದಿದ್ದರು. ಆದರೆ ಪದವಿ ಬಳಿಕ ಮಾಧ್ಯಮದೆಡೆಗೆ ವಾಲಿದರು. ಮೈಸೂರು ದಿಗಂತ ಪತ್ರಿಕೆಯಲ್ಲಿ ಪತ್ರಕರ್ತ ವೃತ್ತಿಯನ್ನು ಆರಂಭಿಸಿದ ಪ್ರಸಾದ್, ಬಳಿಕ ಹಲೋ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಯಲ್ಲಿ ಕೆಲ ಮಾಡಿದ್ದಾರೆ. ಹೆಗ್ಡೆ ನಿಧನಕ್ಕೆ ಗಣ್ಯರು, ಹಿರಿಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.