Publish Date: Tue, 13 Nov 2018 (19:46 IST)
Updated Date: Tue, 13 Nov 2018 (19:48 IST)
ಆಸ್ಪತ್ರೆ ಬಳಿ ಬಳಿ ಟೀ ಕುಡಿಯುತ್ತಿದ್ದ ವೇಳೆ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಜೆಡಿಎಸ್ ಮುಖಂಡರೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಜೆಡಿಎಸ್ ಪಕ್ಷದ ರಾಜ್ಯ ಪರಿಶಿಷ್ಟ ಜಾತಿ ವರ್ಗ(ಎಸ್ಸಿ,ಎಸ್ಟಿ) ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಟಿ ರಾಜಗೋಪಾಲ್ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಕನಕಪುರ ನಗರ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.
ರಾಮನಗರ ಜಿಲ್ಲೆಯ ಪಿ.ರಾಂಪುರದ ರಾಜಗೋಪಾಲ್ ಕನಕಪುರದಲ್ಲಿ ವಾಸಿಸುತ್ತಿದ್ದು ಸಂಜೆ ಕನಕಪುರದ ರಾಮನಗರ ರಸ್ತೆಯಲ್ಲಿನ ಜನನಿ ಆಸ್ಪತ್ರೆ ಬಳಿ ಬಳಿ ಟೀ ಕುಡಿಯುತ್ತಿದ್ದ ವೇಳೆ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಇರಿದು, ಕೊಚ್ಚಿ ಕೊಲೆ ಮಾಡಿದ್ದಾರೆ.
ರಾಜ್ಗೋಪಾಲ್ ಅವರು ಟೀ ಕುಡಿಯಲು ಬರುವ ಮುನ್ನ ಕೆಲವರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಸ್ಥಳಿಯರು ಗಲಾಟೆ ಬಿಡಿಸಿ ಎಲ್ಲರನ್ನೂ ಸಮಾಧಾನ ಪಡಿಸಿ ಕಳುಹಿಸಿದ್ದರು. ನಂತರ ಜನನಿ ಆಸ್ಪತ್ರೆಯ ಬಳಿ ರಾಜ್ಗೋಪಾಲ್ ಟೀ ಕುಡಿಯಲು ಆಗಮಿಸಿದ್ದರು. ಈ ವೇಳೆ ರಾಜ್ಗೋಪಾಲರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.