Publish Date: Tue, 20 Dec 2022 (20:17 IST)
Updated Date: Tue, 20 Dec 2022 (20:24 IST)
ಹುಬ್ಬಳ್ಳಿ ಗೆಳೆಯರು ನನ್ನ ಜೊತೆ ಬರ್ತಾರೆ ಅನ್ನೋದನ್ನ ಆ ದೇವರೇ ಬಲ್ಲ. ನನ್ನ ಮುಂದಿನ ನಡೆಯನ್ನ ಡಿಸೆಂಬರ್ 25 ರಂದು ಬಹಿರಂಗಪಡಿಸುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ನಿಗೂಢವಾಗಿ ಮಾತನಾಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ, ಸಿದ್ಧಾರೂಢ ಹಾಗೂ ಗಳಗನಾಥರ ಗದ್ದುಗೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ತಂಬೂರಿ ಹೆಗಲಿಗೆ ಹಾಕಿಕೊಂಡು ಸಿದ್ಧಾರೂಢರ ಆಶೀರ್ವಾದ ಪಡೆದರು. ದರ್ಶನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಸಿದ್ದಾರೂಢರ ಮಠಕ್ಕೆ ಶುಭ ಸೋಮವಾರ ಬಂದಿದ್ದೇನೆ. ಬೆಳಗ್ಗೆ ತುಮಕೂರು ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿದ್ದೆ. ನಾನೇ ಮಂಗಳಾರತಿ, ವಿಶೇಷ ಪೂಜೆ ಮಾಡಿದ್ದೇನೆ ಎಂದು ತಿಳಿಸಿದರು. ಸಿದ್ದಾರೂಢರ ಅಂಗಾರ ಜಗಕೆಲ್ಲಾ ಬಂಗಾರ ಎಂಬುದು ಜಗಜ್ಜಾಹೀರು. ನನ್ನ ಭವಿಷ್ಯದ ರಾಜಕೀಯ, ಖಾಸಗಿ ಜೀವನ ರೂಪಿಸಲು ಆಶೀರ್ವಾದ ಪಡೆಯಲು ಬಂದಿದ್ದೇನೆ. ಸಿದ್ದಾರೂಢರ ಜೋಳಿಗೆ ಜಗಕೆಲ್ಲಾ ಹೋಳಿಗೆ ಎಂಬ ವಾಣಿ ಇದೆ. ಸಿದ್ದಾರೂಢರ ಜೋಳಿಗೆಯಿಂದ ನನಗೂ ಒಂದು ಹೋಳಿಗೆ ಕೊಡಲಿ ಅಂತ ಬೇಡಲು ಬಂದಿದ್ದೇನೆ. ಬರುವ ದಿನಗಳಲ್ಲಿ ಬದುಕಲು ಶ್ರೀಗಳ ಆಶೀರ್ವಾದ ಬೇಕು. ಸ್ವಾಮೀಜಿ ಮುಂದೆ ನಾನು ಬೇಡಿಕೊಂಡಿದ್ದನ್ನು ಈಗ ಹೇಳಲ್ಲ. ಬೆಂಗಳೂರಿನಲ್ಲಿ ಎಲ್ಲವನ್ನೂ ಬಹಿರಂಗಪಡಿಸ್ತೇನೆ ಎಂದರು.