Select Your Language

Notifications

webdunia
webdunia
webdunia
webdunia

ಅಧಿಕಾರಿಗಳು ಶಾಮೀಲಾಗದೇ ವಕ್ಫ್ ಆಸ್ತಿಯಾಗಿ ಬದಲಿಸಲು ಸಾಧ್ಯವೇ ಇಲ್ಲ: ಜಗದಾಂಬಿಕಾ ಪಾಲ್

Jagadambika Pal

Krishnaveni K

ಬೆಂಗಳೂರು , ಗುರುವಾರ, 7 ನವೆಂಬರ್ 2024 (12:28 IST)
ಬೆಂಗಳೂರು: ರೈತರು, ಮಠ, ಮಂದಿರಗಳ ಜಮೀನುಗಳ ಪಹಣಿಯನ್ನು ಅಧಿಕಾರಿಗಳ ಸಹಕಾರವಿಲ್ಲದೆ ವಕ್ಫ್ ಆಸ್ತಿ ಬದಲಿಸಲು ಹೇಗೆ ಸಾಧ್ಯ ಎಂದು ವಕ್ಫ್ (ತಿದ್ದುಪಡಿ) ವಿಧೇಯಕದ ಕುರಿತ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಪ್ರಶ್ನಿಸಿದರು.
 
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಹುಬ್ಬಳ್ಳಿಯಲ್ಲಿ ರೈತರ ಜಮೀನು, ದೇವಾಲಯಗಳ ಆಸ್ತಿಯನ್ನು, ಮಠಗಳ 500, ಒಂದು ಸಾವಿರ ವರ್ಷಗಳಷ್ಟು ಹಳೆಯ ದಾಖಲೆ ಇರುವ ಜಮೀನನ್ನು ವಕ್ಫ್ ಆಸ್ತಿ ಎಂದು ಘೋಷಿಸುತ್ತಿದ್ದಾರೆ. ಅಲ್ಲದೆ, ಪಹಣಿ, ಆಸ್ತಿ ಹಕ್ಕಿನಲ್ಲೂ ಬದಲಾವಣೆ ಮಾಡಲಾಗುತ್ತಿದೆ; ಇದು ಹೇಗೆ ಸಾಧ್ಯ ಎಂದು ಕೇಳಿದರು.

ಎಲ್ಲ ಕಂದಾಯ ದಾಖಲೆಗಳಿದ್ದರೂ ಈ ರೀತಿ ಆಗುತ್ತಿದೆ. ಇಲ್ಲಿನ ರಾಜ್ಯ ಸರಕಾರ ಈ ನಡುವೆ ಹೇಳಿಕೆ ನೀಡಿ ನೋಟಿಸ್ ವಾಪಸ್ ಪಡೆಯುವುದಾಗಿ ತಿಳಿಸಿದೆ. ಸದ್ಯಕ್ಕೆ ರೈತರನ್ನು ಒಕ್ಕಲೆಬ್ಬಿಸದೆ ಇರಲು ಸರಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರಬಹುದು; ಇದರಿಂದ ಸಮಸ್ಯೆ ಪರಿಹಾರವಾಗಲಿದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಹುಬ್ಬಳ್ಳಿ, ಬೀದರ್, ಗುಲ್ಬರ್ಗ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಇಂಥ ಸಮಸ್ಯೆಗಳಿವೆ. ಪುರಾತನ ಮಠ, ದೇವಾಲಯಗಳ 15 ಸಾವಿರ ಎಕರೆ, ಒಂದು ಸಾವಿರ ಎಕರೆ- ಹೀಗೆ ವಕ್ಫ್ ಆಸ್ತಿ ಎಂದು ತಿಳಿಸಲಾಗುತ್ತಿದೆ. 1920, 1930ರಿಂದ ವ್ಯವಸಾಯ ಮಾಡುತ್ತಿರುವ ರೈತರ ಜಮೀನು ವಕ್ಫ್ ಆಸ್ತಿ ಆಗಲು ಹೇಗೆ ಸಾಧ್ಯ ಎಂದು ಕೇಳಿದರು.

ಇದೊಂದು ಗಂಭೀರ, ದೊಡ್ಡ ಸಮಸ್ಯೆ. 70ಕ್ಕೂ ಹೆಚ್ಚು ಮನವಿಗಳನ್ನು ಈಗಾಗಲೇ ಸ್ವೀಕರಿಸಿದ್ದೇವೆ. ಶಾಸಕರೂ ಮನವಿ ಕೊಟ್ಟಿದ್ದಾರೆ. ಸಾವಿರಾರು ರೈತರು ಇದರಿಂದ ತೊಂದರೆಗೆ ಒಳಗಾಗಲಿದ್ದಾರೆ. ಕರ್ನಾಟಕದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಜೆಪಿಸಿ ಸದಸ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ಅವರೂ ಮಾಹಿತಿ ನೀಡಿದ್ದಾರೆ ಎಂದು ವಿವರ ನೀಡಿದರು.

ಯಾವುದೇ ದಾಖಲಾತಿ ಇಲ್ಲದೆ ವಕ್ಫ್ ಆಸ್ತಿ ಎಂದು ತಿಳಿಸುತ್ತಿದ್ದು, ಟ್ರಿಬ್ಯೂನಲ್ ನಿರ್ಧಾರದ ಬಳಿಕ ಸಂತ್ರಸ್ತರು ಆಸ್ತಿ ಕಳಕೊಳ್ಳುತ್ತಾರೆ. ಇದೊಂದು ಗಂಭೀರ ಸಮಸ್ಯೆ. ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಸಂಬಂಧ ದೇಶದ ವಿವಿಧ ಕಡೆಗಳಿಗೆ ಸಮಿತಿಯು ಭೇಟಿ ಕೊಟ್ಟಿದೆ. ನಾಳೆ ಭುವನೇಶ್ವರ, ಕೋಲ್ಕತ್ತ ಸೇರಿ ಅನೇಕ ಪ್ರದೇಶಗಳಿಗೆ ಭೇಟಿ ಕೊಡಲಿದ್ದೇವೆ ಎಂದು ತಿಳಿಸಿದರು. ಸಮಿತಿಯು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದು ಹೇಳಿದರು.

ಸಮಗ್ರ ಮಾಹಿತಿ ಪಡೆಯಲು ಮತ್ತು ವಿವರ ತಿಳಿಯಲು ಎಲ್ಲರನ್ನೂ ಭೇಟಿ ಮಾಡುತ್ತಿದ್ದೇವೆ. ಕಳೆದೊಂದು ತಿಂಗಳಿನಲ್ಲಿ ಕರ್ನಾಟಕದಲ್ಲಿ ಈ ಗಂಭೀರ ಸಮಸ್ಯೆ ಉದ್ಭವಿಸಿದೆ. ವರದಿಯಲ್ಲಿ ಇದೆಲ್ಲ ವಿವರಗಳನ್ನು ಸೇರಿಸುತ್ತೇವೆ ಎಂದು ಹೇಳಿದರು.

ಜೆಪಿಸಿಯನ್ನು ಸ್ಪೀಕರ್ ರಚಿಸಿದ್ದಾರೆ. ಬಿಜೆಪಿ ಮಾತ್ರವಲ್ಲದೆ, ಸಮಾಜವಾದಿ ಪಕ್ಷ, ಡಿಎಂಕೆ, ಕಾಂಗ್ರೆಸ್, ಒವೈಸಿಯವರೂ ಸೇರಿ ವಿವಿಧ ಪಕ್ಷಗಳ ಸದಸ್ಯರು ಇದರಲ್ಲಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. ರೈತರು, ಜನಸಾಮಾನ್ಯರು, ಮಹಿಳೆಯರು, ಮುಸ್ಲಿಂ ವ್ಯಕ್ತಿಯೂ ಸೇರಿ ಎಲ್ಲರೂ ಇಲ್ಲಿ ಬಂದು ಮನವಿ ಸಲ್ಲಿಸಿದ್ದಾರೆ. ಸಂತ್ರಸ್ತರನ್ನು ಭೇಟಿ ಮಾಡುತ್ತಿದ್ದೇವೆ. ಇಲ್ಲಿ ಕೇವಲ ಬಿಜೆಪಿಯವರಷ್ಟೇ ಬಂದಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
 

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾ ಅಧ್ಯಕ್ಷರಾದ ಬೆನ್ನಲ್ಲೇ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಶಾಕ್: ಬದಲಾಗಲಿದೆ ಪೌರತ್ವ ನಿಯಮ