ಬೆಂಗಳೂರು-ಜನಪ್ರತಿನಿಧಿಗಳು ದೇವರ ಬದಲು ಅಂಬೇಡ್ಕರ್, ಬುದ್ಧ, ಬಸವೇಶ್ವರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ತಪ್ಪಲ್ಲ ಎಂದು ಹೈಕೋರ್ಟ್ ಹೇಳಿದೆ. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯರು ಸಂವಿಧಾನದ ಮೂರನೇ ಷೆಡ್ಯೂಲ್ ಅಡಿ ನಿಬಂಧನೆಗೆ ವಿರುದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ಬುದ್ದ, ಬಸವೇಶ್ವರ ಮತ್ತು ಅಂಬೇಡ್ಕರ್ ಅವರನ್ನು ದೈವ ಸ್ವರೂಪಿಗಳು ಎಂದು ಪರಿಗಣಿಸಲಾಗಿದೆ.
ಸಂವಿಧಾನವು 'ದೇವರು' ಎಂಬ ಶಬ್ದ ಬಳಸಲು ಸೂಚಿಸಿರುವ ಅರ್ಥ ಅದೇ ಆಗಿದೆ ಎಂದು ಅಭಿಪ್ರಾಯಪಟ್ಟಿದೆ. ಬೆಳಗಾವಿಯ ಭೀಮಪ್ಪ ಗುಂಡಪ್ಪ ಗಡಾದ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಅಂಬೇಡ್ಕರ್, ಬುದ್ದ, ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ತಪ್ಪಲ್ಲ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.