ಲಂಡನ್‌ನಲ್ಲಿ ಮಾಡಿರುವ ಭಾಷಣಕ್ಕೆ ಕ್ಷಮೆ ಕೇಳದ ಹೊರತು ರಾಹುಲ್ ಗಾಂಧಿ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು BJP ಮೂಲಗಳು ತಿಳಿಸಿವೆ. ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಸೇರಿ ಹಲವು ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಭಾರತವನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಹೀಗಾಗಿ ಅವರು ಸದನದ ಒಳಗೂ, ಹೊರಗೂ ಕ್ಷಮೆ ಕೇಳಬೇಕು ಎಂದು ಕಳೆದ ಐದು ದಿನಗಳಿಂದ ಉಭಯ ಸದನದಲ್ಲಿ ಆಡಳಿತಾರೂಢ BJP ಆಗ್ರಹಿಸುತ್ತಿದೆ. ಇದೇ ವಿಷಯ ಸಂಬಂಧ ಕಲಾಪಗಳು ನಡೆಯದೇ ಮುಂದೂಡಲಾಗುತ್ತಿದೆ. ವಿವಾದದ ಬಳಿಕ ಗುರುವಾರ ಮೊದಲ ಬಾರಿ ಸಂಸತ್ತಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ತನಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಕೂಡ ಸಂಸತ್ತಿಗೆ ಆಗಮಿಸಿದ್ದರು. ಆದರೆ ಗದ್ದಲದ ನಡುವೆ ಅವರಿಗೆ ಮಾತನಾಡುವ ಅವಕಾಶ ಸಿಕ್ಕಿಲ್ಲ. ಸದ್ಯ ಮುಂದಿನ ವಾರಕ್ಕೆ ಸದನವನ್ನು ಮುಂದೂಡಲಾಗಿದೆ. ಅವರು ಕ್ಷಮೆ ಕೇಳದ ಹೊರತು ಸದನದಲ್ಲಿ ಮಾತನಾಡಲು ಅವಕಾಶ ಕೊಡಬಾರದು ಎಂದು ನಿರ್ಧರಿಸಲಾಗಿದೆ ಎಂದು BJP ಮೂಲಗಳು ಹೇಳಿವೆ