Publish Date: Sat, 17 Aug 2024 (14:07 IST)
Updated Date: Sat, 17 Aug 2024 (14:10 IST)
ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಕೂದಲು ಸಹ ಬಿಜೆಪಿವರಿಗೆ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದ್ದಾರೆ.
ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಕುರಿತು ಶನಿವಾರ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ರಾಜ್ಯಪಾಲರು ಈ ಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿರೋ ಉದಾಹರಣೆಯೇ ಇಲ್ಲ. ಇದರಿಂದ ನಮ್ಮ ಸಿದ್ದರಾಮಯ್ಯ ಅವರ ಒಂದು ಕೂದಲನ್ನೂ ಬಗ್ಗಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಅವರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಕಂಡ ಏಕೈಕ ಅತ್ಯುತ್ತಮ ನಾಯಕ ಸಿದ್ದರಾಮಯ್ಯ. ಅಧಿಕಾರದಲ್ಲಿದ್ದಾಗ ಕುಟುಂಬದವರನ್ನು ಅಕ್ಕಪಕ್ಕ ಸೇರಿಸದೆ ಆಡಳಿತ ಮಾಡಿದ್ದಾರೆ. ಬಿಜೆಪಿಯವರು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದರು.