ಬೆಂಗಳೂರು: ಸಿಎಂ ಆಗುವ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ ಗೆ ಹನಿಟ್ರ್ಯಾಪ್ ವಿಚಾರ ಕಂಟಕವಾಗಲಿದೆಯೇ? ಹೀಗೊಂದು ಅನುಮಾನ ಈಗ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಈಗ ನಡೆಯುತ್ತಿರುವ ಸದನದಲ್ಲೂ ಹನಿ ಟ್ರ್ಯಾಪ್ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಲೈಂಗಿಕ ಕಿರುಕುಳ ಆರೋಪಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ನೇರವಾಗಿ ಡಿಕೆ ಶಿವಕುಮಾರ್ ಮೇಲೆಯೇ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ. ಸಹಕಾರ ಸಚಿವ ಕೆಎನ್ ರಾಜಣ್ಣ ಕೂಡಾ ನನ್ನ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದಿದ್ದಾರೆ.
ಇನ್ನು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ನಮ್ಮ ಪಕ್ಷ ಮಾತ್ರವಲ್ಲ, ಬೇರೆ ಪಕ್ಷದ ನಾಯಕರ ಮೇಲೂ ಹನಿ ಟ್ರ್ಯಾಪ್ ಯತ್ನ ನಡೆದಿರುವುದು ನಿಜ. ಇದರ ಬಗ್ಗೆ ತನಿಖೆಯಾಗಬೇಕು. ಯಾರೇ ತಪ್ಪಿತಸ್ಥರಾದರೂ ಶಿಕ್ಷೆಯಾಗಬೇಕು ಎಂದಿದ್ದಾರೆ.
ಈ ಪ್ರಕರಣವನ್ನು ಪರೋಕ್ಷವಾಗಿ ಡಿಕೆ ಶಿವಕುಮಾರ್ ತಲೆಗೆ ಕಟ್ಟುವ ಯತ್ನ ನಡೆದಿದೆಯೇ ಎಂಬ ಅನುಮಾನ ಮೂಡಿದೆ. ಹೀಗಾದಲ್ಲಿ ಅವರ ಸಿಎಂ ಆಗಬೇಕೆಂಬ ಕನಸಿಗೆ ಮತ್ತೊಂದು ಕಂಟಕ ಎದುರಾದಂತಾಗಲಿದೆ.