ಟೆಹ್ರಾನ್: ಇರಾನ್ ಬೆಂಬಲಿತ ಸಂಘಟನೆಗಳ ನಾಯಕರ ಹತ್ಯೆಗೆ ಪ್ರತೀಕಾರವಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪಸ್ (ಐಆರ್‌ಜಿಸಿ) ಸುಮಾರು 200 ಕ್ಷಿಣಿಗಳನ್ನು ಇಸ್ರೇಲ್‌ನತ್ತ ಮಂಗಳವಾರ ಉಡಾಯಿಸಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅದಕ್ಕೆ ,ಇರಾನ್ ಪ್ರತ್ಯುತ್ತರಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಈ ಸಂಬಂಧ ಮಾಧ್ಯಮ ವರದಿ ಬಿಡುಗಡೆ ಮಾಡಿ, ಇಸ್ರೇಲ್‌ನ ಸಂಭಾವ್ಯ ದಾಳಿಗೆ ಪ್ರತ್ಯುತ್ತರ ನೀಡಲು ಇರಾನ್ ಸಜ್ಜಾಗಿದೆ ಎಂದು ಹೇಳಿದೆ.
'ಒಂದು ವೇಳೆ ಇಸ್ರೇಲ್ ಕ್ರಮ ಕೈಗೊಂಡರೆ, ಇರಾನ್ ಪ್ರತಿ ದಾಳಿ ನಡೆಸುವುದರಲ್ಲಿ ಯಾವುದೇ ಅನುಮಾವಿಲ್ಲ. ಇಸ್ರೇಲ್‌ನ ಹಲವು ತಾಣಗಳ ಮೇಲೆ ದಾಳಿ ನಡೆಸಲು ಪಟ್ಟಿ ಮಾಡಿಕೊಂಡಿದೆ. ಯಾವುದೇ ಸ್ಥಳವನ್ನು ನೆಲಸಮ ಮಾಡಬಲ್ಲದು' ಎಂದು 'ತಸ್ನಿಮ್' ಉಲ್ಲೇಖಿಸಿದೆ.
ಇರಾನ್ ಹಾಗೂ ಇಸ್ರೇಲ್ ನಡುವೆ ದಾಳಿ ಹಾಗೂ ಪ್ರತಿದಾಳಿ ಮುಂದುವರೆದಿದೆ. ಮಂಗಳವಾರ ನಡೆಸಿದ ದಾಳಿಯು ಇಸ್ರೇಲ್ ಮೇಲೆ ಇರಾನ್ ಎರಡನೇ ನೇರ ದಾಳಿಯಾಗಿದೆ.