ಮೈಸೂರು: ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಸಿಪಿ ಯೋಗೇಶ್ವರ್ ಒಬ್ಬ ವಂಚಕ, ಆತನನ್ನು ಸೈನಿಕ ಎಂದು ಕರೆಯಬಾರದು. ಆ ರೀತಿ ಕರೆದರೆ ಸೈನಿಕರಿಗೆ ಅಪಮಾನವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬುಧವಾರ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ ಮಾಡಿದ್ದಾನೆ. ಅವನನ್ನು ಸೈನಿಕ ಅಂತ ಕರೆಯಬಾರದು ಎಂದು ಗುಡುಗಿದರು.
ಮುಡಾ, ವಾಲ್ಮೀಕಿ ವಂಚನೆ ಜತೆಗೆ ಇದೀಗ ಮೂರನೇ ಫ್ರಾಡ್ ಆಗಿರುವ ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳ ಉಪಚುನಾವಣೆಯಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದರು.
ಜೈಲಿಗೆ ಹೋಗಿ ಬಂದ ಒಬ್ಬ ಮಂತ್ರಿಗೆ ಮೈಸೂರುಪೇಟ, ಹಾರ ಹಾಕಿ ಸ್ವಾಗತ ಮಾಡಿದ್ದೀರಿ. ನಿಮ್ಮನ್ನು ವಾಲ್ಮೀಕಿ ಸಮುದಾಯದ ಜನರು ನಂಬುವುದಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಭೈರತಿ ಸುರೇಶ್ ನಂತಹ ಅಯೋಗ್ಯನನ್ನು ಮಂತ್ರಿ ಮಾಡಿಕೊಂಡು ರಾಜ್ಯಕ್ಕೆ ಮಸಿ ಬಳಿದಿದ್ದೀರಿ ಎಂದು ಸಿಎಂ ವಿರುದ್ಧ ಗುಡುಗಿದರು.