ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣ ಸಂಬಂಧ ಅವರನ್ನು ರಾಜ್ಯಕ್ಕೆ ವಾಪಾಸ್ಸು ಕರೆತರಲು ಎಸ್‌ಐಟಿ ತಂಡ ವಿದೇಶಕ್ಕೆ ಹೋಗುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಇಂಟರ್‌ಪೋಲ್ ಅವರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಸೂಕ್ಷ್ಮವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ ರಾಜಕೀಯ ಮುಖಂಡರಿಗೆ ಎಚ್ಚರಿಕೆಯನ್ನು ನೀಡಿದರು.
ಈಗಾಗಲೇ ಪ್ರಜ್ವಲ್ ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಇಂಟರ್ ಪೋಲ್ ಮಾಹಿತಿ ಹಂಚಿಕೊಳ್ಳಲಿದೆ. ಪ್ರಜ್ವಲ್ ಪತ್ತೆಯಾದ ದೇಶದವರು ಇಂಟರ್‌ಪೋಲ್ ಗೆ ತಿಳಿಸುತ್ತಾರೆ, ನಂತರ ನಮ್ಮ ಏಜೆನ್ಸಿಗಳು, ಸಿಬಿಐ ತಿಳಿದು ಅವರ ಮೂಲಕ ನಾವು ತಿಳಿದುಕೊಳ್ಳುತ್ತೇವೆ. ಇಲ್ಲಿಯವರೆಗೆ ಪ್ರಜ್ವಲ್ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.