ಬೆಂಗಳೂರು: ರಾಜಧಾನಿಯ ತಿಲಕನಗರದ ಸ್ವಾಗತ್ ರಸ್ತೆಯಲ್ಲಿದಲಿರುವ ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ಎಂಬ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಿಲಕ್ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳು ಗ್ರಾಹಕರಿಗೆ ಕಡಿಮೆ ಹೂಡಿಕೆ ಹೆಚ್ಚು ಬಡ್ಡಿ, ಲಾಭಾಂಶ ನೀಡುವುದಾಗಿ ಹೇಳಿ ಸುಮಾರು 40 ಜನರಿಗೆ 2 ಕೋಟಿ ರೂ ವಂಚನೆ ಮಾಡಿ ಪರಾರಿಯಾಗಿದ್ದರು.ಈ ಹಿನ್ನಲೆಯಲ್ಲಿ ಪ್ರಕರಣ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದ ಸಂಬಂಧ ತಿಲಕ್ ನಗರ ಪೊಲೀಸರು ಅಬ್ದುಲ್ ನಜೀಮ್, ಹಿದಾಯತ್ ಉಲ್ಲಾ, ನಜೀಮ್, ಅಲಿಂ ಎಂಬುವವರನ್ನು ಬಂಧಿಸಿ ವಿಚಾರಣೆ ನೆಡೆಸುತ್ತಿದ್ದಾರೆ. ಮುಖ್ಯವಾಗಿ ಆರೋಪಿಗಳು ತಿಲಕ್ ನಗರ ನಿವಾಸಿಯೊಬ್ಬರ ಬಳಿಯಲ್ಲಿ 10 ಲಕ್ಷ ಮತ್ತು ಸ್ನೇಹಿತರ ಬಳಿ 5 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಈ ನಾಲ್ವರು ಅರೋಪಿಗಳ ವಿರುದ್ಧ 2019 ಬಡ್ಸ್ ಆಕ್ಟ್ ಸೆಕ್ಷನ್ 21, ಕೆಪಿಐಡಿ ಆಕ್ಟ್ ಸೆಕ್ಷನ್ 9 ಹಾಗೂ ಐಪಿಸಿ 506, 420 ಅಡಿ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.