ನನ್ನ ಪತಿ ಹಿಡಿದ ದಾರಿಯನ್ನೇ ನಾನು ಹಿಡಿಯಬೇಕಾಗುತ್ತದೆ ಎಂದು ಮೃತ ಡಿವೈಎಸ್‌ಪಿ ಎಂ.ಕೆ.ಗಣಪತಿ ಪತ್ನಿ ಪಾವನಾ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ ಸಿಐಡಿ ವರದಿಯನ್ನಾದರೂ ಆಧರಿಸಿ ಕ್ರಮ ಕೈಗೊಳ್ಳಿ. ನನ್ನ ಪತಿ ಸಾವಿಗೆ ನ್ಯಾಯ ಕೊಡಿಸಿ. ಅವರು ಆತ್ಮಹತ್ಯೆಗೂ ಮುನ್ನ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸರಕಾರ ಎಷ್ಟು ದುರ್ಬಲವಾಗಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು.
ನನ್ನ ಮಗ ಚಿಕ್ಕವನಾಗಿದ್ದರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾನೆ. ಈ ಕುರಿತು ಖಾಸಗಿ ದೂರನ್ನು ಸಹ ದಾಖಲಿಸಿದ್ದೇವೆ. ಜುಲೈ 18 ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ವಿಚಾರಣೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ನನ್ನ ಪತಿ ಹಿಡಿದ ದಾರಿಯನ್ನೆ ನಾನು ಹಿಡಿಯುತ್ತೇನೆ. ನಮಗೆ ಬೇರೆ ದಾರಿಯೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಸರಕಾರ ನಮ್ಮ ತೇಜೊವಧೆಗೆ ಮುಂದಾಗಿದೆ. ಇದರಿಂದ ನಾವು ಸಮಾಜದಲ್ಲಿ ಬದುಕುವುದು ಹೇಗೆ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ.
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡು 10 ದಿನಗಳು ಕಳೆದರು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಕುಟುಂಬಸ್ಥರಾದ ಸಿಎಂ ಸಿದ್ದರಾಮಯ್ಯ ಕೌಟಂಬಿಕ ಸಮಸ್ಯೆಗಳನ್ನು ಅರಿತುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಪ್ರಕರಣದ ನಂತರ ಆದ ಎಲ್ಲ ಬೆಳವಣಿಗೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಮೃತ ಎಂ.ಕೆ.ಗಣಪತಿ ಪತ್ನಿ ಪಾವನಾ ಕಣ್ಣೀರು ಹಾಕಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.