ಮೌಢ್ಯ ಪದ್ದತಿ ಜೀವಂತವಿರುವುದರಿಂದಲೇ ಸಮಾಜದಲ್ಲಿ ಶೋಷಣೆ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು 1983 ರಿಂದ ರಾಜಕೀಯದಲ್ಲಿದ್ದೇನೆ. ಐವರು ಮುಖ್ಯಮಂತ್ರಿಗಳ ಜೊತೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇಬ್ಬರು ಮುಖ್ಯಮಂತ್ರಿಗಳ ಜೊತೆ ಡಿಸಿಎಂನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ, ಈ ರೀತಿಯ ಹೊಸ ಕಾರ್ಯಕ್ರಮವನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಹೇಳಿದರು.
ಅನಿಷ್ಟ ಹಾಗೂ ಮೌಢ್ಯ ಪದ್ದತಿಗಳಿಂದ ಸಮಾಜದಲ್ಲಿ ಶೋಷಣೆ ಹೆಚ್ಚಾಗುತ್ತದೆ. ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ನಮ್ಮ ಸರಕಾರ ಬದ್ಧವಾಗಿದೆ. ಧ್ವನಿ ಇಲ್ಲದವರ ಪರವಾಗಿ ನಮ್ಮ ಸರಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅನ್ನ ಭಾಗ್ಯ ಯೋಜನೆ ಕುರಿತು ಹಲವರು ಟೀಕೆ ಮಾಡಿದ್ದರು. ಆದರೆ, ಈ ಯೋಜನೆ ನನಗೆ ಸಂಪೂರ್ಣ ತೃಪ್ತಿ ತಂದಿದೆ. ಬರ ಪರಿಸ್ಥಿತಿಯಲ್ಲಿ ಜನರು ಊರು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಿತ್ತು. ಈ ಸಮಯದಲ್ಲಿ ಅನ್ನ ಭಾಗ್ಯ ಯೋಜನೆ ಎಲ್ಲರಿಗೂ ಸಹಾಯಕವಾಯಿತು ಎಂದು ಹೇಳಿದರು.
ನಾನು ಶಾಲೆಗೆ ಹೋಗುವ ಸಮಯದಲ್ಲಿ ಕಾಲಿಗೆ ಚಪ್ಪಲಿ ಹಾಕಿಕೊಂಡು ಹೋಗುತ್ತಿದ್ದೆ. ನನ್ನ ಹಾಗೆ ವಿದ್ಯಾರ್ಥಿಗಳು ಪರದಾಡುವುದು ಬೇಡ ಎಂದು ಶೂ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.