ಕೊಪ್ಪಳ: ಬಿಜೆಪಿ ತನ್ನ ಆಡಳಿತದಲ್ಲಿ ರಾಜ್ಯದ ಒಬ್ಬ ಬಡವನಿಗೂ ಕೂಡಾ ಮನೆ ನಿರ್ಮಿಸಿ ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದರೆ ರಾಜ್ಯಪಾಲರ ಬಳಿ ಹೋಗಿ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲೆಸೆದರು.
ನಗರದಲ್ಲಿ ಸೊಮವಾರ ನಡೆದ ಸಾಧನಾ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ರೋಷಾವೇಷದಿಂದ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಭರವಸೆ ನೀಡದಿದ್ದರೂ ಜನರಿಗೆ ಸೂರನ್ನು ನಿರ್ಮಿಸಿಕೊಟ್ಟಿದೆ. ಇದು ನಮ್ಮ ಆರನೆ ಗ್ಯಾರಂಟಿಯಾಗಿದೆ. ಬಿಜೆಪಿ ಇಂಥ ಒಳ್ಳೆಯ ಕೆಲಸ ಒಂದಾದರೂ ಮಾಡಿದೆಯಾ ಎಂದು ಪ್ರಶ್ನೆ ಮಾಡಿದರು.
'ಬಿಜೆಪಿ ಸದಾ ಧಮ್ಮು, ತಾಕತ್ತು ಎಂದು ಮಾತನಾಡುತ್ತ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಬಿಜೆಪಿ ರಾಜ್ಯದಲ್ಲಿ ಸ್ವಂತ ಶಕ್ತಿಯಲ್ಲಿ ಎಂದೂ ಅಧಿಕಾರಕ್ಕೆ ಬಂದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.