ಬೆಂಗಳೂರು: ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ. ನಾನು ಏನೇ ಆದರೂ ನಿಮ್ಮವನೇ, ನಿಮ್ಮ ಊರಿನವನೇ. ಈ ಕ್ಷೇತ್ರದವನೇ, ನಿಮ್ಮ ಕುಟುಂಬದ ಸದಸ್ಯನೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಇದನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
1.23 ಲಕ್ಷ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ್ದೀರಿ. ನಮ್ಮ ನಿಮ್ಮ ನಡುವಿನ ಸಂಬಂಧ ಭಕ್ತನಿಗೂ ಭಗವಂತನಿಗೆ ಇರುವ ಸಂಬಂಧ. ಇದನ್ನು ಉಳಿಸಿಕೊಂಡು ಕಾಪಾಡಿಕೊಂಡು ನಾವೆಲ್ಲರೂ ಮುಂದೆ ಹೋಗೋಣ. ನಮ್ಮ ಜಿಲ್ಲೆಯಿಂದ ಸುಮಾರು 60 ರಿಂದ 70 ಸಾವಿರ ಜನ ಬೆಂಗಳೂರು ನಗರಕ್ಕೆ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ. ಇದನ್ನು ತಪ್ಪಿಸಲು ರಾಜ್ಯಾದ್ಯಂತ ಪಂಚಾಯತಿ ಮಟ್ಟದಲ್ಲಿ ಕೆಪಿಎಸ್ ಶಾಲೆಗಳನ್ನು ನಿರ್ಮಿಸಿ, ಗುಣಮಟ್ಟದ ಶಿಕ್ಷಣ ಒದಗಿಸಲು ನಮ್ಮ ಸರ್ಕಾರ ಚಿಂತಿಸಿದೆ.
ಕನಕಪುರ ಕ್ಷೇತ್ರದಲ್ಲಿ 8 ಸಾವಿರಕ್ಕೂ ಹೆಚ್ಚು ರೈತರ ಜಮೀನಿಗೆ ಪೋಡಿ ಕೆಲಸ ಮಾಡಿಸಿಕೊಡಲಾಗಿದೆ. 25 ಸಾವಿರ ರೈತರಿಗೆ ಅನುಕೂಲವಾಗಲಿ ಎಂದು ಟ್ರಾನ್ಸ್‌ಫಾರ್ಮರ್ ನೀಡಿದ್ದೇವೆ. ನಾವು ನಿರ್ಮಿಸಿದ ಶುದ್ಧ ಘಟಕದ ನೀರಿನ ಯೋಜನೆ ಮತ್ತು ಸೋಲಾರ್ ಪಾರ್ಕ್ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಸಲು ನಮ್ಮ ಸರ್ಕಾರ 19 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಿದ್ದು, ಅನ್ನದಾತರ ಅನುಕೂಲಕ್ಕಾಗಿ ಹಲವು ನೀರಾವರಿ ಯೋಜನೆಗಳು ಕೈಗೆತ್ತಿಕೊಂಡಿದೆ.