ಬೆಂಗಳೂರು: ಕರ್ನಾಟಕದಲ್ಲಿ ಈಗ ಜಾತಿಗಣತಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಸಮೀಕ್ಷಾ ವರದಿ ಹೊರಹಾಕಲು ಸಿದ್ಧತೆ ನಡೆಸಿದ್ದಾರೆ. ಆದರೆ ಜಾತಿಗಣತಿಗೆ ಯಾರೂ ಮನೆಗೆ ಬಂದೇ ಇಲ್ಲ, ಹಾಗಿದ್ದರೆ ಗಣತಿ ಹೇಗಾಯ್ತು ಎಂದು ವಿಪಕ್ಷಗಳು ಮತ್ತು ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಈ ಬಗ್ಗೆ ನಿನ್ನೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ನಮ್ಮ ಮನೆಗಾಗಲೀ ತಾತನ ಮನೆಗಾಗಲೀ ಯಾರೂ ಸಮೀಕ್ಷೆ ನಡೆಸಲು ಬಂದೇ ಇಲ್ಲ. ಹಾಗಿದ್ದರೆ ಈ ಜಾತಿಗಣತಿ ಯಾವ ಆಧಾರದಲ್ಲಿ ನಡೆಯಿತು ಎಂದು ಪ್ರಶ್ನೆ ಮಾಡಿದ್ದಾರೆ.
ಸಾರ್ವಜನಿಕರೂ ಸೋಷಿಯಲ್ ಮೀಡಿಯಾಗಳಲ್ಲಿ ಇದೇ ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ಮನೆಗೆ ಇದುವರೆಗೆ ಯಾವುದೇ ಅಧಿಕಾರಿಗಳೂ ಜಾತಿಗಣತಿ ಮಾಡಲು ಬಂದಿಲ್ಲ. ಹಾಗಿದ್ದರೆ ಈ ಸಮೀಕ್ಷೆ ವರದಿ ತಯಾರಾಗಿದ್ದು ಹೇಗೆ ಮತ್ತು ಯಾವ ಆಧಾರದಲ್ಲಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಏಪ್ರಿಲ್ 17 ರಂದು ಸಿಎಂ ಸಿದ್ದರಾಮಯ್ಯ ಜಾತಿಗಣತಿ ಸಮೀಕ್ಷಾ ವರದಿ ಹೊರಹಾಕಲು ಸಿದ್ಧತೆ ನಡೆಸಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ.