Select Your Language

Notifications

webdunia
webdunia
webdunia
webdunia

ಗೃಹ ಖಾತೆ ನಿಭಾಯಿಸಲಾಗದ ಜಿ. ಪರಮೇಶ್ವರ್ ರಾಜೀನಾಮೆ ಸಲ್ಲಿಸಲಿ: ಡಾ. ಅಶ್ವತ್ಥನಾರಾಯಣ್

G Parameshwar

Sampriya

ಬೆಂಗಳೂರು , ಗುರುವಾರ, 16 ಮೇ 2024 (16:56 IST)
Photo Courtesy X
ಬೆಂಗಳೂರು: ರಾಜ್ಯದ ಗೃಹ ಸಚಿವರಿಗೆ ಸೂಕ್ಷ್ಮತೆ, ಹಿರಿತನ ಇದ್ದರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಇಲಾಖೆಯಲ್ಲಿ ಗರಿಷ್ಠ ಹಸ್ತಕ್ಷೇಪ ಇದೆ. ಗೃಹ ಸಚಿವರೂ ಸಂಪೂರ್ಣ ಅಸಹಾಯಕರಾಗಿದ್ದಾರೆ ಎಂದು ತಿಳಿಸಿದರು. ಯಾವ ಪೊಲೀಸ್ ಅಧಿಕಾರಿಗಳೂ ಬಿಗಿಯಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗದಂಥ ವ್ಯವಸ್ಥೆ ಇಲ್ಲಿದೆ ಎಂದು ಹೇಳಿದರು.

ಈ ಜಡತ್ವವನ್ನು ಹೋಗಲಾಡಿಸಿ ಸರಿಪಡಿಸಲು ಸರಕಾರ ಮುಂದಾಗಬೇಕಿದೆ. ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಕೊಡಬೇಕು. ಪರಿಹಾರ ಕೊಡಬಾರದ ಸಂದರ್ಭದಲ್ಲಿ ಈ ಸರಕಾರ ಪರಿಹಾರ ಕೊಟ್ಟಿದೆ. ಕಾನೂನು ಕ್ರಮವನ್ನು ಬಿಗಿಗೊಳಿಸಬೇಕು. ಗೃಹ ಸಚಿವರು ರಾಜೀನಾಮೆ ನೀಡಬೇಕು; ಸಿಎಂ, ಗೃಹ ಸಚಿವರ ರಾಜೀನಾಮೆ ಪಡೆದುಕೊಳ್ಳಲಿ ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಒಂದು ವರ್ಷದ ಅವಧಿಯಲ್ಲಿ ಇಡೀ ಕರ್ನಾಟಕದಲ್ಲಿ ಕೊಲೆ, ಸುಲಿಗೆ, ಮತಾಂಧ ಶಕ್ತಿಗಳ ವಿಜೃಂಭಣೆ, ತುಷ್ಟೀಕರಣದ ರಾಜಕಾರಣ ಸೇರಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.

ಈ ಅಸಮರ್ಥ ಸರಕಾರವು ಶೂನ್ಯ ಅಭಿವೃದ್ಧಿಯ ಸರಕಾರ ಎಂದು ಟೀಕಿಸಿದರು. ಆಡಳಿತದಲ್ಲಿ ಈ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಭ್ರಷ್ಟಾಚಾರದ ದಂಧೆ, ವರ್ಗಾವಣೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುವುದು ಜಗಜ್ಜಾಹೀರಾದ ವಿಚಾರ ಎಂದು ಆಕ್ಷೇಪಿಸಿದರು.

ವರ್ಗಾವಣೆ, ಹುದ್ದೆ ನಿಗದಿಗೆ ಈ ಸರಕಾರದಲ್ಲಿ ರೇಟ್ ಕಾರ್ಡ್ ನಿಗದಿಯಾಗಿದೆ. ಸಿಎಂ ಕಚೇರಿಯಿಂದ ವಿವಿಧ ಕಚೇರಿಗಳು, ಶಾಸಕರು- ಎಲ್ಲರೂ ಮಧ್ಯಸ್ಥಿಕೆ ವ್ಯಕ್ತಿಗಳ ಜೊತೆಗೂಡಿದ ಕಾರಣ ಕಾನೂನು- ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಿಟಿ ಕ್ರೈಮ್ ಬ್ಯೂರೋ ಮತ್ತು ನ್ಯಾಷನಲ್ ಕ್ರೈಮ್ ಬ್ಯೂರೋ ಪ್ರಕಾರ ಅಪರಾಧ ಪ್ರಮಾಣ ಶೇ 60ಕ್ಕಿಂತ ಹೆಚ್ಚಾಗಿದೆ ಎಂದು ಆರೋಪಿಸಿದರು.

ಹೆಣ್ಮಕ್ಕಳಿಗಂತೂ ಸುರಕ್ಷತೆ ಇಲ್ಲ. ನೇಹಾ ಕೊಲೆ ಬಳಿಕ ಅಂಜಲಿ ಹತ್ಯೆ ನಡೆದಿದೆ. ಇವತ್ತು ಬೆಳಿಗ್ಗೆ ಸುಬ್ರಹ್ಮಣ್ಯಪುರದಲ್ಲಿ ಇನ್ನೊಂದು ಕೊಲೆ ನಡೆದಿದೆ. ಅಂಜಲಿ ಮನೆಯವರು ಈ ಯುವತಿಗೆ ಬೆದರಿಕೆ ಕುರಿತು ಠಾಣೆಗೆ ತಿಳಿಸಿದ್ದರೂ ಸಹ ಕ್ರಮ ವಹಿಸಲು ವಿಫಲವಾಗಿದ್ದಾರೆ. ಭಂಡ ಸರಕಾರ ಎಲ್ಲ ಸೂಕ್ಷ್ಮತೆಯನ್ನು ಕಳಕೊಂಡಿದೆ ಎಂದು ತಿಳಿಸಿದರು.

ನಾವು ಭಂಡರು, ಅಸಮರ್ಥರು ಎಂಬಂತೆ ಈ ಸರಕಾರ ವರ್ತಿಸುತ್ತಿದೆ. ಅನುಭವಿ ಸಿಎಂ, ಸಚಿವರು ಉತ್ತಮ ಆಡಳಿತ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ತಿಳಿಸಿದರು. ಜನಪರವಾಗಿ ಸರಕಾರ ಕಾರ್ಯನಿರ್ವಹಿಸುವಂತೆ ಮಾಡಲು ಬಿಜೆಪಿ ಪ್ರತಿಭಟನೆಗಳನ್ನು ಸಂಘಟಿಸಲಿದೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.

ರಾಜ್ಯ ವಕ್ತಾರ ಎಂ.ಜಿ.ಮಹೇಶ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಭಾಗವಹಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಬಳಿಕ ಸೀತಾ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್ ಶಾ