Publish Date: Mon, 26 Mar 2018 (13:05 IST)
Updated Date: Mon, 26 Mar 2018 (13:09 IST)
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಕಲಬುರಗಿ ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ಭೀಮಾಶಂಕರ್ ಬಿಲಗುಂದಿ ಆಯ್ಕೆಯಾಗಿದ್ದಾರೆ.
ನಗರದ ಪಿಡಿಎ ಇಂಜಿನೀಯರಿಂಗ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಹಾಗೂ ಹಾಲಿ ಅಧ್ಯಕ್ಷ ಬಸವರಾಜ್ ಭೀಮಳ್ಳಿ ಅವರನ್ನು ನೂರಾ ಹದಿಮೂರು ಮತಗಳ ಅಂತರದಿಂದ ಸೋಲಿಸುವ ಮೂಲಕ ಸಂಸ್ಥೆಯ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಲಗುಂದಿ ಪ್ಯಾನಲ್ ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಾ. ಶಿವಾನಂದ್ ದೇವರಮನಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ ಹದಿಮೂರು ಸ್ಥಾನಗಳ ಪೈಕಿ ಎಂಟು ಸ್ಥಾನಗಳು ಬಿಲಗುಂದಿ ಪ್ಯಾನಲ್ ಪಾಲಾದ್ರೆ ಐದು ಸ್ಥಾನಗಳು ಮಾತ್ರ ಭೀಮಳ್ಳಿ ಪ್ಯಾನಲ್ ನವರು ಗೆದ್ದಿದ್ದಾರೆ.
ನಿನ್ನೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ತಲಾ ಒಂದು ಹುದ್ದೆ, ಹಾಗೂ 13 ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಮತದಾನ ನಡೆದಿತ್ತು. ಇಂದು ಮತ ಎಣಿಕೆ ಮಾಡಲಾಯಿತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಬಿಲಗುಂದಿ ಪ್ಯಾನಲ್ ಸಂಸ್ಥೆಯ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿದೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಬಿಲಗುಂದಿ ಪ್ಯಾನೆಲ್ ನ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.