ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು ಮುಖಭಂಗವಾದಂತಾಗಿದೆ.
ಪ್ರಿಯಾಂಕ್ ಖರ್ಗೆ ಮನವಿಗೆ ಸ್ಪಂದಿಸಿ ರಾಜ್ಯ ಸಚಿವ ಸಂಪುಟ ಸಾರ್ವಜನಿಕ ಸ್ಥಳಗಳು, ಶಾಲೆ, ಮೈದಾನಗಳಲ್ಲಿ ಆರ್ ಎಸ್ಎಸ್ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ನಿಯಂತ್ರಣ ಹೇರುವ ಕಾಯಿದೆಯೊಂದನ್ನು ಜಾರಿಗೆ ತಂದಿತ್ತು. ಇದರಿಂದ ಆರ್ ಎಸ್ಎಸ್ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಸರ್ಕಾರದ ಒಪ್ಪಿಗೆ ಪಡೆಯಬೇಕಿತ್ತು.
ಆದರೆ ಈಗ ಧಾರವಾಡ ಹೈಕೋರ್ಟ್ ಪೀಠ ಇದಕ್ಕೆ ತಡೆ ನೀಡಿದೆ. ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ಪೀಠ ರಾಜ್ಯ ಸರ್ಕಾರ, ಗೃಹ ಇಲಾಖೆ ಮತ್ತು ಹುಬ್ಬಳ್ಳಿ ಕಮಿಷನರ್ ಗೆ ನೋಟಿಸ್ ಜಾರಿ ಮಾಡಿದೆ. 10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟವೆಂದು ಪರಿಗಣಿಸಿ ಆರ್ ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡದೇ ಇರುವ ಸರ್ಕಾರದ ಕ್ರಮ ಪ್ರಶ್ನಿಸಿ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಈ ಬಗ್ಗೆ ಇದೀಗ ಕೋರ್ಟ್ ಆದೇಶ ನೀಡಿದ್ದು 10 ಜನಕ್ಕಿಂತ ಹೆಚ್ಚು ಸೇರಿದರೆ ಅಪರಾಧವೆಂದು ಸರ್ಕಾರೀ ಆದೇಶದಲ್ಲಿದೆ. ರಸ್ತೆ, ಪಾರ್ಕ್, ಮೈದಾನ ಇತ್ಯಾದಿ ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸ್ ಕಾಯ್ದೆಯಲ್ಲಿರುವ ಅಧಿಕಾರವನ್ನು ಬಳಸಿ ಸರ್ಕಾರ ಈ ಆದೇಶ ನೀಡಿದೆ. ಆದರೆ ಸಂವಿಧಾನದ ಆರ್ಟಿಕಲ್ 19(1)ಎ, ಬಿ ನೀಡಿರುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ. ಸಂವಿಧಾನ ನೀಡಿದ ಹಕ್ಕನ್ನು ಸರ್ಕಾರಗಳು ಕಿತ್ತುಕೊಳ್ಳಲಾಗದು ಎಂದು ಆದೇಶ ನೀಡಿದೆ. ಹೀಗಾಗಿ ಈಗ ಈ ತೀರ್ಪು ಸರ್ಕಾರದ ಆದೇಶಕ್ಕೆ ಮುಖಭಂಗವಾದಂತಿದೆ.