Publish Date: Fri, 10 Feb 2023 (20:56 IST)
Updated Date: Fri, 10 Feb 2023 (20:58 IST)
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಹೊಸ ವರ್ಷಾಚರಣೆ ಮಾಡಲು ಹೋದ ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ, ಗಾಜಿಯಾಬಾದ್ ನಿವಾಸಿಯಾದ ಟೆಕ್ಕಿ ಅಭಿನವ್ ಮಿಂಗ್ವಾಲ್ ಅವರ ಶವ ತಿಂಗಳ ಬಳಿಕ ನದಿಯೊಂದರ ಬಳಿ ಪತ್ತೆಯಾಗಿದೆ. ಅಭಿನವ್ ಮಿಂಗ್ವಾಲ್ ಹಾಗೂ ಆತನ ಸ್ನೇಹಿತರು ಕಳೆದ ವರ್ಷ ಡಿಸೆಂಬರ್ 15 ರಂದು ಹಿಮಾಚಲ ಪ್ರದೇಶದ ಕುಲುವಿಗೆ ಪ್ರವಾಸ ತೆರಳಿದ್ದರು. ಡಿಸೆಂಬರ್ 28 ರಂದು ಆತನ ಸ್ನೇಹಿತರು ಬಸ್ ಮೂಲಕ ವಾಪಸ್ ಗಾಜಿಯಾಬಾದ್‌ಗೆ ಮರಳಿದ್ದರು. ಆದರೆ ಅಭಿನವ್ ಮಿಂಗ್ವಾಲ್ ಹೊಸ ವರ್ಷದ ಪಾರ್ಟಿ ಮುಗಿಸಿ ಬರುವುದಾಗಿ ಹೇಳಿ ಅಲ್ಲೇ ಉಳಿದಿದ್ದು ಜ.1 ರಂದು ರಿಟರ್ನ್ ಟಿಕೆಟ್ ಬುಕ್ ಮಾಡಿದ್ದು, ಜನವರಿ 2 ರಂದು ಮನೆಗೆ ಬರುವುದಾಗಿ ಹೇಳಿದ್ದ. ಆದರೆ ಜನವರಿ 2 ಬಂದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಪೋಲಿಸರಿಗೆ ತಿಳಿಸಿ ವಿಚಾರಣೆ ನಡೆಸಿದಾಗ 35 ದಿನಗಳ ನಂತರ ಕುಲು ಸಮೀಪದ ಪಾರ್ವತಿ ನದಿಯಲ್ಲಿ ಬಂಡೆಗಳ ಮಧ್ಯೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಹೊಸ ವರ್ಷದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ಥಳದಿಂದ ಸುಮಾರು 800 ಮೀಟರ್ ದೂರದಲ್ಲಿ ಈತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.