Select Your Language

Notifications

webdunia
webdunia
webdunia
webdunia

ತನಿಖಾ ಸಂಸ್ಥೆಗಳ ಅಧಿಕಾರಿಗಳ ಜೊತೆ ಕುಮಾರಸ್ವಾಮಿ ವರ್ತನೆ ಬಗ್ಗೆ ಕಾಂಗ್ರೆಸ್ ಹೊಸ ಆರೋಪ

HD Kumaraswamy

Krishnaveni K

ಬೆಂಗಳೂರು , ಗುರುವಾರ, 3 ಅಕ್ಟೋಬರ್ 2024 (08:45 IST)
ಬೆಂಗಳೂರು: ತನಿಖಾ ಸಂಸ್ಥೆಗಳು ಮತ್ತು ಅಧಿಕಾರಿಗಳನ್ನು ತಮ್ಮ ಮೂಗಿನ ನೇರಕ್ಕೆ ವರ್ತಿಸುವ ರೀತಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬೆದರಿಸುತ್ತಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪ ಮಾಡಿದೆ.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದು ಸೈಟು ವಾಪಸ್ ಪಡೆಯಲು ಮನವಿ ಮಾಡಿದ ಬೆನ್ನಲ್ಲೇ ಮುಡಾ ಆಯುಕ್ತರು ಸೈಟು ವಾಪಸ್ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಮುಡಾ ಅಧಿಕಾರಿಗಳ ವಿರುದ್ಧವೇ ತನಿಖೆ ಮಾಡಬೇಕು. ಈ ಅಕ್ರಮದಲ್ಲಿ ಅವರೂ ಭಾಗಿಯಾಗಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿರುವಾಗ ಒಂದೇ ದಿನದಲ್ಲಿ ಸೈಟ್ ವಾಪಸ್ ಪಡೆದುಕೊಳ್ಳಲು ಮುಡಾ ಆಯುಕ್ತರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದರು.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಕೇಂದ್ರ ಸಚಿವರಾದ ಶ್ರೀ ಹೆಚ್. ಡಿ ಕುಮಾರಸ್ವಾಮಿರವರು ಮೂಡ ಹಗರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳನ್ನು ಮತ್ತು ಮೂಡ ಆಯುಕ್ತರನ್ನು ರಾಜಕೀಯವಾಗಿ ಟೀಕಿಸಿರುವುದು ಅವರ ಹತಾಶವದದ ಸಂಕೇತವಾಗಿರುತ್ತದೆ’ ಎಂದಿದೆ.

‘ತನಿಖಾ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಮೂಗಿನ ನೇರಕ್ಕೆ ವರ್ತಿಸುವ ರೀತಿಯಲ್ಲಿ ಕೇಂದ್ರ ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ ರವರು ಬೇದರಿಸುತ್ತಿರುವುದು, ತನಿಖೆಯ ಹಾದಿಯನ್ನು ತಪ್ಪಿಸುವ ಉದ್ದೇಶವಾಗಿರುತ್ತದೆ. ಕರ್ನಾಟಕ ಹೈ ಕೋರ್ಟಿನ           ತೀರ್ಪಿನಲ್ಲಿ ಮುಖ್ಯಮಂತ್ರಿಗಳ ಪತ್ನಿಯು ಪಕ್ಷಗಾರರು ಆಗಿರುವುದಿಲ್ಲ. ಮೂಡ ಹಗರಣದಲ್ಲಿ ನಿವೇಶನಗಳನ್ನು ವಾಪಸ್ಸು ನೀಡುವ ನಿರ್ಧಾರ ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಮೂಡ ಹಗರಣದಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಯಾವುದೇ ತೀರ್ಮಾನಗಳನ್ನು ಅಥವಾ ತಮ್ಮ ಅಭಿಪ್ರಾಯಗಳನ್ನು ಆಯೋಗದ ಮುಂದೆ ಸಲ್ಲಿಸಲು ಎಲ್ಲರಿಗೂ ಅವಕಾಶವಿರುತ್ತದೆ. ನಿಯಮಗಳನ್ನು ಮೀರಿ ಮೂಡದಲ್ಲಿ ಪರ್ಯಾಯ ಕೈಗಾರಿಕಾ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಕುಮಾರಸ್ವಾಮಿರವರು ತಮ್ಮ ಮೇಲಿನ ಆರೋಪಗಳಿಗೆ ಇಲ್ಲಿಯವರೆಗೆ ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ. ಆದರೆ ರಾಜಕೀಯ ಕಾರಣಗಳಿಗಾಗಿ ಸಿಎಂ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿರುವ ವಿಷಯದಲ್ಲಿ ಅಧಿಕಾರಿಗಳು ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ವಿಶ್ವ ಭಾರತಿ ಹೌಸಿಂಗ್ ಸೊಸೈಟಿ ಯಲ್ಲಿ ನಿವೇಶನ ಪಡೆದು ಮತ್ತೆ ವಾಪಸ್ಸು ನೀಡಿದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿರವರು ಇಂತಹ ಹೇಳಿಕೆಗಳನ್ನು  ಮಾಡುತ್ತಿರಬಹುದು?’ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಮೂಡ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ವಿಚಾರಣೆ ನಡೆದು ತೀರ್ಪು ಬರುವ ಮುನ್ನವೇ ತಮ್ಮ ವೈಯಕ್ತಿಕ ಅನಿಸಿಕೆಗಳ ಆಧಾರದ ಮೇಲೆ ಮತ್ತು ಮುಖ್ಯಮಂತ್ರಿಗಳ ಮೇಲಿನ ಸೇಡಿನ ರಾಜಕಾರಣಕ್ಕಾಗಿ ಮಾನ್ಯ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ತಾವೇ ತೀರ್ಪುಗಳನ್ನು ನೀಡಲು ಹೊರಟಿದ್ದಾರೆ. ಬಿಜೆಪಿ ನಾಯಕರು ಈ ಹಿಂದೆ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿಕೊಂಡು ನ್ಯಾಯಾಲಯದಲ್ಲಿ ಕೇಸು ದಾಖಲಾದಾಗ ಸ್ವತ್ತನ್ನು ವಾಪಸ್ಸು ಕೊಟ್ಟಿರುತ್ತಾರೆ. ಮಾನ್ಯ ಕುಮಾರಸ್ವಾಮಿ ರವರ ಮೇಲೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಸದನದ ಒಳಗೆ ದಾಖಲೆಗಳ ಸಮೇತ ಮೂಡ ಹಗರಣವನ್ನು ತನಿಖೆ ಮಾಡಲು ಸಭಾಪತಿಗಳನ್ನು ಕೋರಿರುತ್ತಾರೆ. ಇದರ ಬಗ್ಗೆ ಚಕಾರ ಎತ್ತದ ಕುಮಾರಸ್ವಾಮಿರವರು ರಾಜ್ಯದಲ್ಲಿ ಪ್ರತೀ ದಿನ ತಮ್ಮ ಮೇಲೆ ತನಿಖೆ ಮಾಡುವ ಅಧಿಕಾರಿಗಳನ್ನು ತೇಜೋವದೆ ಮಾಡುವ ಕೆಲಸಕ್ಕೆ ಮುಂದಾಗಿರುತ್ತಾರೆ. ಇವರ ಸುಳ್ಳಿನ ಆರೋಪಕ್ಕೆ ಲೋಕಾಯುಕ್ತದ ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಉತ್ತರ ನೀಡಿರುತ್ತಾರೆ. ಮಾನ್ಯ ಕುಮಾರಸ್ವಾಮಿರವರು ಪದೇ ಪದೇ ತನಿಖಾ ಸಂಸ್ಥೆಗಳ ಮೇಲೆ, ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮತ್ತು ಬೆದರಿಕೆ ಹಾಕುವ ಪ್ರಯತ್ನವನ್ನು ಕೈಬಿಡಲಿ. ಕೇಂದ್ರದ ಬಿಜೆಪಿ ಸರ್ಕಾರ ಸರ್ಕಾರಿ ಅಧಿಕಾರಿಗಳನ್ನಿ ಬೆದರಿಸುವ ಕಾರಣಕ್ಕಾಗಿ ಕುಮಾರಸ್ವಾಮಿ ರವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿರುವಂತೆ ಕಾಣುತ್ತಿದೆ. ಇಂತಹ ಹತಾಶ ಮನೋಭಾವದಿಂದ ಕೇಂದ್ರ ಸಚಿವ ಕುಮಾರಸ್ವಾಮಿರವರು ತಮ್ಮ ಸಚಿವ ಸ್ಥಾನಕ್ಕೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ತಾವೇ ಮಸಿ ಬಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವಿಂದು ಬಹಳ ಪುಣ್ಯದ ವರ್ಷದಲ್ಲಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್