ಬೆಂಗಳೂರು: ನಾಗಮಂಗಲದಲ್ಲಿ ನಡೆದ ಕೋಮುಗಲಭೆ ವಿಚಾರ ಈಗ ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. ಇದೀಗ ಗೃಹಸಚಿವ ಜಿ ಪರಮೇಶ್ವರ್ ವಿರುದ್ಧ ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕೋಮುಗಲಭೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು. ಇದು ಸಣ್ಣ ಘಟನೆಯಷ್ಟೇ. ಇಲ್ಲಿ ನಡೆದಿರುವುದು ಕೋಮುಗಲಭೆಯೇ ಅಲ್ಲ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದರು.
ಆದರೆ ಗೃಹಸಚಿವರ ಹೇಳಿಕೆ ಕುಮಾರಸ್ವಾಮಿಯವರನ್ನು ಕೆರಳಿಸಿದೆ. ಸರ್ವಜನಾಂಗದ ಶಾಂತಿಯ ತೋಟ ಎಂದು ಒಂದು ಸಮುದಾಯವನ್ನು ಓಲೈಸಲು ಹೋಗಿದ್ದಕ್ಕೇ ಈವತ್ತು ಈ ಘಟನೆಯಾಗಿದೆ. ಪೆಟ್ರೋಲ್ ಬಾಂಬ್, ತಲ್ವಾರ್ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ನಿಮ್ಮ ಆಡಳಿತ ಯಾವ ಮಟ್ಟಿಗಿದೆ ಎಂದು ಗೊತ್ತಾಗುತ್ತದೆ. ನಿಮ್ಮದು ಇಟ್ಕೊಂಡು ನಮಗೆ ಬುದ್ಧಿ ಹೇಳಲು ಬರಬೇಡಿ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಇನ್ನು ನಾಗಮಂಗಲ ಘಟನೆಯ ನಿಜವಾದ ರೂವಾರಿ ಈಗಾಗಲೇ ಪರಾರಿಯಾಗಿರುತ್ತಾನೆ. ಜೀವನಕ್ಕೆ ಆಧಾರವಾಗಿದ್ದವರನ್ನು ಯಾರನ್ನಾದರೂ ಒಳಗೆ ಹಾಕಿಸಿರ್ತಾರೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಘಟನೆ ನಡೆದ ನಾಗಮಂಗಲಕ್ಕೆ ನಾಳೆ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.