Publish Date: Mon, 02 Mar 2026 (13:25 IST)
Updated Date: Mon, 02 Mar 2026 (13:30 IST)
ಬೆಂಗಳೂರು: ಗ್ಯಾರಂಟಿ ಬಗ್ಗೆ ಈಗ ಕಾಂಗ್ರೆಸ್ ನ ಒಬ್ಬೊಬ್ಬರೇ ಶಾಸಕರೇ ಬಹಿರಂಗವಾಗಿ ಅಪಸ್ವರವೆತ್ತಲು ಶುರು ಮಾಡಿದ್ದಾರೆ. ಇದೀಗ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಎಲ್ಲರಿಗೂ ಉಚಿತ ಗ್ಯಾರಂಟಿ ಕೊಡೋದು ಕಷ್ಟ ಎಂದಿದ್ದಾರೆ.
ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರಿಂದಲೇ ಈ ಬಾರಿ ಕಾಂಗ್ರೆಸ್ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ಬಹುಮತ ಬಂದಿತ್ತು. ಈಗಾಗಲೇ ಸರ್ಕಾರ 2 ವರ್ಷ ಪೂರೈಸಿದೆ. ಆದರೆ ಗ್ಯಾರಂಟಿಯಿಂದಾಗಿ ಆರ್ಥಿಕವಾಗಿ ಕಷ್ಟವಾಗುತ್ತಿದೆ ಎಂಬುದನ್ನು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.
ಇದರ ಬೆನ್ನಲ್ಲೇ ಡಿಕೆ ಸುರೇಶ್ ಕೂಡಾ ಶ್ರೀಮಂತರು ಗ್ಯಾರಂಟಿ ಯೋಜನೆ ಪಡೆಯುವುದು ತಪ್ಪು ಎಂದಿದ್ದರು. ಅವರಿಗೆ ಸಚಿವ ಎಂಬಿ ಪಾಟೀಲ್ ಕೂಡಾ ಧ್ವನಿಗೂಡಿಸಿದ್ದರು. ಶ್ರೀಮಂತರು ತಾವಾಗಿಯೇ ಉಚಿತ ಗ್ಯಾರಂಟಿ ಯೋಜನೆ ತೆಗೆದುಕೊಳ್ಳುವುದು ನಿಲ್ಲಿಸಲಿ ಎಂದಿದ್ದರು.
ಇದೀಗ ಎಚ್ ಸಿ ಬಾಲಕೃಷ್ಣ ಸರದಿ. ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ಸರ್ಕಾರ ಪರಿಷ್ಕರಣೆ ಮಾಡಬೇಕು. ಹೊಸದಾಗಿ ಅರ್ಜಿ ಆಹ್ವಾನಿಸಿ ಅರ್ಹ ಬಡವರಿಗೆ ಮಾತ್ರ ಗ್ಯಾರಂಟಿ ಸಿಗುವಂತೆ ಮಾಡಬೇಕು. ಆರ್ಥಿಕವಾಗಿ ಸದೃಢರಾಗಿರುವವರಿಗೂ ಈಗ ಉಚಿತ ಗ್ಯಾರಂಟಿ ಸಿಗುತ್ತಿದೆ. ಇದರಿಂದ ಯೋಜನೆಯ ಉದ್ದೇಶ ಈಡೇರುತ್ತಿಲ್ಲ ಎಂದಿದ್ದಾರೆ.