Publish Date: Thu, 26 Feb 2026 (14:25 IST)
Updated Date: Thu, 26 Feb 2026 (14:25 IST)
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ ಜಿ ಪರಮೇಶ್ವರ್, ಅವರಿಗೆ ಹಾಗೆ ಅನಿಸಿರಬಹುದು ಎಂದಿದ್ದಾರೆ.
ನಿನ್ನೆ ಮಾಧ್ಯಮಗಳ ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿಯಿಂದ ಹೊರೆಯಾಗುತ್ತಿದೆ. ಆದರೆ ಜನರಿಗೆ ಇದರಿಂದ ಆರ್ಥಿಕ ಅನುಕೂಲವಾಗುತ್ತಿದೆ. ಹಾಗಾಗಿ ಗ್ಯಾರಂಟಿ ನೀಡುತ್ತಿದ್ದೇವೆ ಎಂದಿದ್ದರು. ಅವರ ಹೇಳಿಕೆ ಬಗ್ಗೆ ಇಂದು ಮಾಧ್ಯಮಗಳು ಗೃಹಸಚಿವರನ್ನು ಪ್ರಶ್ನೆ ಮಾಡಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಡಿಕೆ ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರು. ಚುನಾವಣೆ ಸಂದರ್ಭದಲ್ಲಿ ನಾವು ಎಲ್ಲರೂ ಸೇರಿ ಗ್ಯಾರಂಟಿ ಯೋಜನೆ ಬಗ್ಗೆ ತೀರ್ಮಾನ ಮಾಡಿದ್ದೆವು. ನಾನು ಆ ಕಮಿಟಿಗೆ ಅಧ್ಯಕ್ಷನಾಗಿದ್ದೆ. ಎಲ್ಲರೂ ಸೇರಿಕೊಂಡು ಚರ್ಚೆ ಮಾಡಿಯೇ ತೀರ್ಮಾನ ಮಾಡಿದ್ದು.
ಅವರಿಗೆ ಈಗ ಅನಿಸಿರಬಹುದು. ಅನೇಕ ವಿಚಾರಗಳು ನಮಗೆ ಗೊತ್ತಿಲ್ಲದೇ ಇರುವುದು ಅವರಿಗೆ ಗೊತ್ತಿರುತ್ತದೆ. ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಈಗಲೂ ಅವರು ಅಧ್ಯಕ್ಷರೇ. ಇದನ್ನು ಸಾಲ್ವ್ ಯಾರು ಮಾಡಬೇಕು? ಮುಖ್ಯಮಂತ್ರಿಗಳು, ಅಧ್ಯಕ್ಷರು ನಾವು ಎಲ್ಲಾ ಸೇರಿಕೊಂಡು ಮಾಡಬೇಕು. ನಾವು ಚರ್ಚೆ ಮಾಡ್ತೀವಿ ಇದರ ಬಗ್ಗೆ ಎಂದಿದ್ದಾರೆ.
ಇನ್ನು ಶ್ರೀಮಂತರು ಗ್ಯಾರಂಟಿ ಯೋಜನೆ ಕೈ ಬಿಡುವ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್, ನಾವು ವರ್ಗೀಕರಣ ಮಾಡುವುದು ಬೇಡ ಎಂದು ನಿರ್ಧರಿಸಿದ್ದೆವು. ಹಣವಂತರು ಯಾರು ತೆಗೆದುಕೊಳ್ತಾರೆ ಎಂದುಕೊಂಡಿದ್ದೆವು. ಆದರೆ ಈಗ 100 ಎಕರೆ ಜಮೀನು ಇರುವವರೂ 2000 ರೂ. ತಗೊಳ್ತಾರೆ ಎಂದಿದ್ದಾರೆ.