ಹಾವೇರಿ: ಗಾಯವಾಗಿದೆ ಎಂದು ಆಸ್ಪತ್ರೆಗೆ ಹೋದರೆ ಹೊಲಿಗೆ ಹಾಕುವ ಬದಲು ಫೆವಿಸ್ಟಿಕ್ ಹಾಕಿದ ಇವಳೆಂಥಾ ನರ್ಸ್ ಎಂದು ನಿಮಗೆ ಅನಿಸಬಹುದು. ಇದು ನಡೆದಿರುವುದು ಹಾವೇರಿಯಲ್ಲಿ.
ಹಾವೇರಿ ಜಿಲ್ಲೆ ಹಾನಗಲ ತಾಲೂಕಿನ ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರ ಶಶ್ರೂಷಕಿಯೊಬ್ಬರು ಗಾಯಗೊಂಡು ಚಿಕಿತ್ಸೆಗೆ ಬಂದಿದ್ದ ಬಾಲಕನಿಗೆ ಚಿಕಿತ್ಸೆ ನೀಡಿದ ಬಳಿಕ ಸ್ಟಿಚ್ ಹಾಕುವ ಬದಲು ಫೆವಿಸ್ಟಿಕ್ ಹಾಕಿ ಎಡವಟ್ಟು ಮಾಡಿದ್ದಾಳೆ.
7 ವರ್ಷದ ಬಾಲಕ ಗುರುಕಿಶನ್ ಅಣ್ಣಪ್ಪ ಎಂಬ ಬಾಲಕ ಆಡುವಾಗ ಬಿದ್ದು ಕೆನ್ನೆಗೆ ಗಾಯ ಮಾಡಿಕೊಂಡಿದ್ದ. ರಕ್ತ ಸುರಿಯುತ್ತಿದ್ದ ಬಾಲಕನನ್ನು ತಕ್ಷಣವೇ ಪೋಷಕರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು.
ಫೆವಿಸ್ಟಿಕ್ ಯಾಕೆ ಹಾಕಿದ್ದೀರಿ ಎಂದು ಪೋಷಕರು ಕೇಳಿದಾಗ ಚರ್ಮದ ಮೇಲೆ ಕಲೆ ಆಗುತ್ತದೆ. ಅದಕ್ಕೆ ಮೇಲಷ್ಟೇ ಹಾಕಿದ್ದೇನೆ ಎಂದು ನರ್ಸ್ ಕಾರಣ ಕೊಟ್ಟಿದ್ದಾಳಂತೆ! ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಡಿಎಚ್ ಒ ಡಾ ರಾಜೇಶ ಸುರಗಿಹಳ್ಳಿ ನರ್ಸ್ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.