ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯ ವರ್ಷಂಪ್ರತಿಯಂತೆ ನಾಳೆ ತೆರೆಯಲಾಗುತ್ತಿದೆ. ಎಷ್ಟು ಹೊತ್ತಿಗೆ ದೇವಿಯ ದರ್ಶನ ಸಿಗಲಿದೆ, ಎಷ್ಟು ಹೊತ್ತಿಗೆ ದೇವಾಲಯ ತೆರೆಯಲಿದೆ ಇಲ್ಲಿದೆ ವಿವರ.
ಹಾಸನಾಂಬೆಯ ಗರ್ಭಗುಡಿಯನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ರಾಜಕೀಯ, ಸಿನಿಮಾ ಸೇರಿದಂತೆ ಗಣ್ಯರೂ ದೇವಿಯ ದರ್ಶನಕ್ಕೆ ಬರುತ್ತಾರೆ. ಈ ಬಾರಿ ಅಕ್ಟೋಬರ್ 24 ರಿಂದ ನವಂಬರ್ 3 ರವರೆಗೆ ದೇವಾಲಯ ತೆರೆಯಲಾಗುತ್ತಿದೆ.
ಈ ವರ್ಷ ಹಾಸನಾಂಬೆಯ ಉತ್ಸವ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿದೆ. ದಸರಾ ರೀತಿಯಲ್ಲಿ ದೀಪಾಲಂಕಾರ, ಫಲಪುಷ್ಪ ಪ್ರದರ್ಶನ, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಈ ಬಾರಿ ಸುಮಾರು 20 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ.
ನಾಳೆ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಗರ್ಭಗುಡಿ ತೆರೆಯಲಾಗುತ್ತದೆ. ದೇವಿಯ ದರ್ಶನಕ್ಕಾಗಿ ಬರುವ ಭಕ್ತರಿಗೆ ಬ್ಯಾರಿಕೇಡ್ ಹಾಕಿ ಸರತಿಯಲ್ಲಿ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಬರುವವರಿಗೆ ದೊನ್ನೆ ಪ್ರಸಾದವೂ ವಿತರಿಸಲಾಗುತ್ತದೆ. ಒಟ್ಟು 11 ದಿನ ದೇವಾಲಯದ ಗರ್ಭಗುಡಿ ತೆರೆಯಲಾಗುತ್ತದೆ. ಈ ಪೈಕಿ 9 ದಿನ ಮಾತ್ರ ಭಕ್ತರ ದರ್ಶನಕ್ಕೆ ಅವಕಾಶವಿದೆ. ನೇರ ದರ್ಶನ ಪಡೆಯಲು ಬಯಸುವವರು 1000 ರೂ. ಮತ್ತು 300 ರೂ. ಗಳ ಟಿಕೆಟ್ ಖರೀದಿ ಮಾಡಿ ದರ್ಶನ ಪಡೆಯಬಹುದಾಗಿದೆ. ನೈವೇದ್ಯದ ಹೊರತಾಗಿ ದಿನದ 24 ಗಂಟೆಯೂ ದೇವರ ದರ್ಶನಕ್ಕೆ ಅವಕಾಶವಿದೆ. ನವಂಬರ್ 3 ಕ್ಕೆ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಗರ್ಭಗುಡಿ ಮುಚ್ಚಲಾಗುತ್ತದೆ.