ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಬಾಬೂಸಾಪಾಳ್ಯ ಬಳಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮಡಿದವರ ಸಂಖ್ಯೆ 5 ಕ್ಕೆ ಏರಿಕೆಯಾಗಿದ್ದು, ಇನ್ನೂ ನಾಲ್ವರ ಮೃತದೇಹಗಳಿಗಾಗಿ ಶೋಧ ಮುಂದುವರಿದಿದೆ.
ಕಟ್ಟದ ಕಾಮಗಾರಿ ನಡೆಯುತ್ತಿರುವಾಗಲೇ ಅನಾಹುತ ಸಂಭವಿಸಿದೆ. ಬಹುಮಹಡಿ ಕಟ್ಟಡವಿಡೀ ಕುಸಿದು ಬಿದ್ದಿದೆ. ಇದರಲ್ಲಿ ಸುಮಾರು 17 ನೌಕರರು ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈಗಾಗಲೇ ಐವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಇನ್ನೂ ನಾಲ್ವರ ಮೃತದೇಹ ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಓರ್ವನನ್ನು ಜೀವಂತವಾಗಿ ಹೊರತೆಗೆಯಲಾಗಿದ್ದು ಸದ್ಯಕ್ಕೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಬೀಡುಬಿಟ್ಟಿರುವ ಅಗ್ನಿ ಶಾಮಕ ದಳ ಸಿಬ್ಬಂದಿ ಹಿಟ್ಯಾಚಿ ಬಳಸಿ ಶೋಧ ಕಾರ್ಯ ನಡೆಸುತ್ತಿದೆ. ತುರ್ತು ಸೇವೆಗಾಗಿ ಆಂಬ್ಯುಲೆನ್ಸ್ ಕೂಡಾ ಸನ್ನದ್ಧವಾಗಿ ನಿಂತಿದೆ.
ಮೃತರಲ್ಲಿ ಯಾರೂ ಕರ್ನಾಟಕದವರಿಲ್ಲ. ಎಲ್ಲರೂ ಬಿಹಾರ, ಆಂಧ್ರ, ತಮಿಳುನಾಡು ಮೂಲದವರು ಎಂದು ಪೊಲೀಸರು ಹೇಳಿದ್ದಾರೆ. ಎಷ್ಟು ಜನ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಸ್ಥಳೀಯರು ಹೇಳುತ್ತಿದ್ದಾರೆ. ಅದೃಷ್ಟವಶಾತ್ ಖಾಲಿ ಜಾಗಕ್ಕೆ ಕಟ್ಟಡ ಕುಸಿದುಬಿದ್ದಿರುವುದರಿಂದ ಕೂದಲೆಳೆಯಲ್ಲೇ ಇರುವ ಅಕ್ಕಪಕ್ಕದ ಮನೆಗಳ ನಿವಾಸಿಗಳು ಬಚಾವ್ ಆಗಿದ್ದಾರೆ.