ಮಂಗಳೂರು: ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರದು ಹಿಂದೂ ಡಿಎನ್‌ಎಯೇ ಆಗಿದ್ದರೆ ಸ್ವಾಮೀಜಿ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಅವರ ಡಿಎನ್‌ಎ ಪರೀಕ್ಷೆ ಮಾಡಿಸಿದ್ದಲ್ಲಿ, ಅವರು ಯಾಕೆ ಹೀಗೇ ಮಾತನಾಡುತ್ತಾರೆಂದು ತಿಳಿಯುತ್ತದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.
ಈ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯನ್ನು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಪುಡಿ ರಾಜಕಾರಣಿಗಳಿಗೆ ಹೋಲಿಸಿರುವುದನ್ನು ಪೂಂಜ ಖಂಡಿಸಿ, ಆಕ್ರೋಶ ಹೊರಹಾಕಿದರು.
ಹರಿಪ್ರಸಾದ್ ಅವರು ಕೇಸರಿ ಹಾಗೂ ಖಾವಿ ಬಗ್ಗೆ ಗೌರವವಿಲ್ಲ. ಅವರ ಡಿಎನ್‌ಎ ಪರೀಕ್ಷೆ ಮಾಡಿಸಿದರೆ ಅದರಲ್ಲಿ ಕೇಸರಿ ಇದೆಯೇ, ಹಸಿರು ಇದೆಯೇ ಬಿಳಿ ಇದೆಯೇ ಎಂದು ತಿಳಿಯುತ್ತದೆ ಎಂದರು.
ಹಿಂದೂ ಮತ್ತು ಮುಸಲ್ಮಾನರ ಡಿಎನ್‌ಎ ಒಂದೇ ಎಂದು ಬಿ.ಕೆ.ಹರಿಪ್ರಸಾದ್ ಹಿಂದೊಮ್ಮೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ನಾವು ಬದ್ಧರಾಗಿಲ್ಲ. ಹಿಂದೂಗಳದು ಶ್ರೀರಾಮನ, ಶ್ರೀ ಕೃಷ್ಣನ ಡಿಎನ್‌ಎ ಎಂದರು.
ಮುಸಲ್ಮಾನ ಧರ್ಮಗುರು ಅಥವಾ ಕ್ರೈಸ್ತರ ಪಾದ್ರಿ ಬಗ್ಗೆ ಈ ರೀತಿ ಹೇಳಿಕೆ ನೀಡಲು ಅವರಿಗೆ ತಾಕತ್ತು ಇದೆಯೇ. ಸ್ವಾಮೀಜಿ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಹಿಂದೂ ಸಮಾಜ ಅವರಿಗೆ ತಕ್ಕ ಉತ್ತರ ನೀಡಲಿದೆ ಎಂದರು.