ಬೆಂಗಳೂರು : ಐಫೋನ್ ತಯಾರಿಸುವ ಬಹುರಾಷ್ಟ್ರೀಯ ಫಾಕ್ಸ್ಕಾನ್ ಕಂಪನಿಗೆ 300 ಎಕರೆ ಭೂಮಿ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ.
ಶೀಘ್ರವೇ ಕಂಪನಿಗೆ ಜಾಗ ಬಿಟ್ಟುಕೊಡಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶುಕ್ರವಾರ ವಿಧಾನಸಭೆಗೆ ತಿಳಿಸಿದರು.
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಂಪನಿಗೆ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಹೋಬಳಿಗೆ ಸೇರಿದ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದಲ್ಲಿ ದಲ್ಲಿ 300 ಎಕರೆ ಜಾಗ ಕೊಡಲಾಗುತ್ತದೆ.
ಕಂಪನಿ ಸುಮಾರು 8,500 ಕೋಟಿ ರೂ. ಹೂಡಿಕೆ ಮಾಡಿ ತಯಾರಿಕಾ ಘಟಕ ಸ್ಥಾಪಿಸಲಿದೆ. ಭೂಮಿ ಹಸ್ತಾಂತರವಾಗುತ್ತಿದ್ದಂತೆ ಕಂಪನಿಯು ನಿರ್ಮಾಣ ಕಾಮಗಾರಿ ಶುರು ಮಾಡಬಹುದು. ನಿರೀಕ್ಷೆ ಪ್ರಕಾರ ಮುಂದಿನ ವರ್ಷ ಉತ್ಪಾದನೆ ಕೂಡ ಆರಂಭಿಸಲಿದೆ. 50 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಈ ಯೋಜನೆಯ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಿದೆ ಎಂದು ವಿವರಿಸಿದರು.