ಬೆಂಗಳೂರು: ಈ ವರಮಹಾಲಕ್ಷ್ಮಿ ಹಬ್ಬದ ವೇಳೆ ಗೃಹ ಲಕ್ಷ್ಮಿ ಯೋಜನೆಯ ಹಣವೂ ನಿಮ್ಮ ಖಾತೆಗೆ ಸೇರುತ್ತೆ ಎಂದಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ಸುಳ್ಳಾಗಿದೆ. ಇದೀಗ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಈ ಯೋಜನೆಯಡಿಯಲ್ಲಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಖಾತೆಗೆ ಜಮೆಯಾಗುತ್ತದೆ. ಆದರೆ ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಮನೆ ಯಜಮಾನಿಯರ ಖಾತೆಗೆ ಬಂದಿಲ್ಲ.
ಇದರ ಬಗ್ಗೆ ಮಹಿಳೆಯರು ಎಲ್ಲೇ ಹೋದರೂ ಸಚಿವರನ್ನು ಕೇಳುತ್ತಲೇ ಇದ್ದಾರೆ. ಕಳೆದ ವಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಯೋಜನೆಯ ಕಂತಿನ ಹಣ ಬಿಡುಗಡೆಯಾಗಿದೆ. ಸದ್ಯದಲ್ಲೇ ನಿಮ್ಮ ಖಾತೆಗೆ ಹಣ ಬರಲಿದೆ ಎಂದಿದ್ದರು. ಹೀಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ ಬರುತ್ತದೆ ಎಂದು ಮಹಿಳೆಯರು ಕಾತುರದಿಂದ ಕಾದಿದ್ದರು.
ಆದರೆ ಇದೀಗ ಮಹಿಳೆಯರಿಗೆ ತಮ್ಮ ಖಾತೆಗೆ ಹಣ ಜಮೆ ಆಗಿದೆಯಾ ಎಂದು ನೋಡಿ ಇಲ್ಲದೇ ಇರುವುದು ನೋಡಿ ನಿರಾಸೆಯೇ ಗ್ಯಾರಂಟಿಯಾಗಿದೆ. ಭರವಸೆ ನೀಡಿ 15 ದಿನಗಳಾಗುತ್ತಾ ಬಂದರೂ ಮಹಿಳೆಯರ ಖಾತೆಗೆ ಹಣ ಜಮಾವಣೆ ಆಗಿಲ್ಲ. ಇದೀಗ ರಾಜ್ಯ ಸರ್ಕಾರವಂತೂ ಮುಡಾ ಹಗರಣದ ಬಿಸಿಯಲ್ಲಿ ಮುಳುಗಿ ಹೋಗಿದೆ. ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ದೊಡ್ಡ ತಲೆನೋವಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳು ಕೇವಲ ಬಡವರಿಗೆ ಮಾತ್ರ ಮೀಸಲಾಗುವಂತೆ ಮಾಡಲು ಏನಾದರೂ ದಾರಿ ಇದೆಯಾ ಎಂದು ಹುಡುಕುತ್ತಿದೆ. ಈ ನಡುವೆ ಗೃಹಲಕ್ಷ್ಮಿ ಹಣ ಬರದೇ ಇರುವುದು ನೋಡಿದರೆ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆಯಾ ಎಂಬ ಅನುಮಾನ ಮೂಡಿದೆ.