ಚಿತ್ರದುರ್ಗ (ಜು.17): ಭದ್ರಾ ಮೇಲ್ದಂಡೆ ಯೋಜನೆ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಜನರ ಬಹು ಕನಸಿನ ಯೋಜನೆ. ಈ ಕನಸು ನನಸಾಗಲು ಕಾಲ ಕೂಡಿದ್ದು, ಭದ್ರಾ ಡ್ಯಾಂನಿಂದ 700 ಕ್ಯೂಸೆಕ್ಸ್ ನೀರು ಹರಿಸಲು ಸರ್ಕಾರ ಆದೇಶಿಸಿದೆ. ಸರ್ಕಾರದ ಈ ನಡೆಗೆ ಮಲೆನಾಡು ಭಾಗದ ಅನ್ನದಾತರು ವಿರೋಧ ಮಾಡಿದ್ದಾರೆ.
ಇದ್ರಿಂದ ಕೋಟೆನಾಡಿನ ರೈತರು ಕಾಡಾ ಸಲಹಾ ಸಮಿತಿ ನಿರ್ಧಾರಕ್ಕೆ ಕೆರಳಿದ್ದು, ಶಾಸಕರೂ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಕೋಟೆನಾಡು ಚಿತ್ರದುರ್ಗ ಸತತವಾಗಿ ಬರದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಜಿಲ್ಲೆ ಹತ್ತಾರು ವರ್ಷಗಳಿಂದ ಬರದಿಂದ ತತ್ತರಿಸಿ, ಬಯಲುಸೀಮೆ ಜನರು ಹನಿ ನೀರಿಗೂ ನಲುಗಿ ಹೋಗಿದ್ದಾರೆ. ಇದರಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಈ ಭಾಗದ ಅನ್ನದಾತರ ಹೋರಾಟಕ್ಕೆ ದಶಕಗಳೇ ಉರುಳಿವೆ. ಆದರೆ ಇದೀಗ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿಸಲು ಸರ್ಕಾರ ಒಂದು ಹೆಜ್ಜೆ ಮುಂದೆ ಸಾಗಿದೆ.
ಇನ್ನೂ ಈ ನಡುವೆ ಚಿತ್ರದುರ್ಗದ ಹಿರಿಯೂರಿನ ವಾಣಿ ವಿಲಾಸ ಜಲಾಶಯಕ್ಕೆ, ರಾಜ್ಯ ಸರ್ಕಾರ ಕಳೆದ ವಾರ ಭದ್ರಾ ಡ್ಯಾಂನಿಂದ ನೀರು ಹರಿಸಲು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಆದೇಶಿಸಿತ್ತು. ಇದರಿಂದ ಕಳೆದ ಒಂದು ವಾರದಿಂದ ವೇದಾವತಿ ನದಿಯ ಮೂಲಕ ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು ಲಿಪ್ಟ್ ಆಗುತ್ತಿತ್ತು. ಆದರೆ ರಾಜ್ಯ ಸರ್ಕಾರದ ಆದೇಶಕ್ಕೆ ಮಲೆನಾಡು, ಭಾಗದ ಅನ್ನದಾತರು, ದಾವಣಗೆರೆ ಸಂಸದ ಭದ್ರಾ ನೀರು ಹರಿಸದಂತೆ ವಿರೋಧಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿಸಬಾರದು ಎಂದು ಸರ್ಕಾರಕ್ಕೆ ಮನವಿ ಮಾಡ್ತಿದ್ದಾರೆ.
ಭದ್ರಾ ನೀರಾವರಿ ಸಲಹಾ ಸಮಿತಿ ಶಿವಮೊಗ್ಗದಲ್ಲಿ ನಿನ್ನೆ ಸಭೆ ನಡೆಸಿದ್ದು, ಭದ್ರಾ ಡ್ಯಾಂ ನೀರನ್ನ ವಿವಿ ಸಾಗರಕ್ಕೆ ಹರಿಸಬಾರದು ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಈ ನಡುವೆ ಬಯಲುಸೀಮೆ ಚಿತ್ರದುರ್ಗದ ರೈತರು ಕೂಡಾ ಕೆರಳಿದ್ದಾರೆ. ಕಾಡಾ ಸಮಿತಿಯ ನಿರ್ಧಾರಕ್ಕೆ ಆಕ್ರೋಶಗೊಂಡಿರುವ ಜಿಲ್ಲೆಯ ಅನ್ನದಾತರು ಗರಂ ಆಗಿದ್ದು, ಶುಕ್ರವಾರ ಚಿತ್ರದುರ್ಗದ ಖಾಸಗಿ ಹೊಟೇಲ್ ನಲ್ಲಿ ಭದ್ರಾ ಮೇಲ್ದಂಡೆ ಹೋರಾಟ ಸಮಿತಿಯ ಕೆಲ ಮುಖಂಡರು ಸಭೆ ನಡೆಸಿದ್ದು, ಭದ್ರಾ ಜಲಾಶಯದಿಂದ 12.5 ಟಿಎಂಸಿ ನೀರು ವಾಣಿ ವಿಲಾಸ ಸಾಗರಕ್ಕೆ ಅಲೋಕೇಷನ್ ಆಗಿದ್ದು, ಸರ್ಕಾರ ಆದೇಶಿದೆ ಎಂದಿದ್ದಾರೆ. ನಮ್ಮ ಜಿಲ್ಲೆಗೆ ವೇದಾವತಿ ನದಿ ಮೂಲಕ ನೀರು ಹರಿಸುತ್ತಿದ್ದು, ನಮ್ಮ ಸಹೋದರ ಜಿಲ್ಲೆಯ ರೈತರು ಕೂಡಾ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನೂ ಈ ಬೆಳವಣಿಗೆಯ ನಡುವೆಯೂ ಕಳೆದ ವಾರದಿಂದ ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿ ವಿವಿ ಸಾಗರ ಡ್ಯಾಂಗೆ ನೀರು ಹರಿಯುತ್ತಿದೆ. ಅಲ್ಲದೆ ಸರ್ಕಾರ ಭದ್ರಾ ಜಲಾಶಯದಿಂದ 12.5 ಟಿಎಂಸಿ ಹಾಗೂ ತುಂಗಾ ಡ್ಯಾಂನಿಂದ 17.4 ಟಿಎಂಸಿ ಸೇರಿ ಒಟ್ಟು 29.9 ಟಿಎಂಸಿ ವಿವಿ ಸಾಗರಕ್ಕೆ ಹರಿಸಬೇಕು ಎಂದು ರಾಜ್ಯ ಸರ್ಕಾರ ಹಿಂದೆಯೇ ಆದೇಶಿಸಿದೆ. ಆದರೆ ಜಲಾಶಯದ ಒಳ ಹರಿವು ಕಡಿಮೆ ಇದ್ದು ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಮಲೆನಾಡಿನ ರೈತರು ವಿರೋಧಿಸುತ್ತಿದ್ರೆ, ಈ ನಡುವೆ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ.