Publish Date: Mon, 23 Feb 2026 (16:14 IST)
Updated Date: Mon, 23 Feb 2026 (16:17 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಆರ್ಥಿಕವಾಗಿ ದಿವಾಳಿ ಆಗಿದೆ. ರಾಜ್ಯ ಸರಕಾರದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇದ್ದು, ಹಣ ಇಲ್ಲದುದಕ್ಕಾಗಿ, ಖಜಾನೆ ಖಾಲಿ ಆದುದರಿಂದ ಮೀಸಲಾತಿಯ ಗೊಂದಲ ಸೃಷ್ಟಿಸಿ ನೇಮಕಾತಿ ಮುಂದೂಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಇನ್ನೂ ಒಳ ಮೀಸಲಾತಿ ಜಾರಿಯಾಗಿಲ್ಲ ಎಂದು ಬಿಜೆಪಿ ನಿಯೋಗವು ಇಂದು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಗಮನ ಸೆಳೆಯಿತು. ಬಳಿಕ ಗೋವಿಂದ ಕಾರಜೋಳ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ನೇಮಕಾತಿ ಇಲ್ಲದೇ ವಿದ್ಯಾವಂತ ಯುವಜನತೆ ನಿರಾಶರಾಗಿದ್ದಾರೆ. ಅವರು ಹತಾಶರಾಗಿದ್ದು, ಅವರನ್ನು ನಿರಾಶರಾಗಲು, ಹತಾಶರಾಗಲು ಬಿಡಬಾರದೆಂದು ತಿಳಿಸಿದರು. ನಾವು ನೇಮಕಾತಿಯ ಪರವಾಗಿದ್ದೇವೆ ಎಂದು ಹೇಳಿದರು. ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟಿನ ಆದೇಶ ಪಾಲಿಸಬೇಕು. ವರದಿಗಳನ್ನು ಗಮನದಲ್ಲಿ ಇಟ್ಟುಕೊಂಡು ಒಳ ಮೀಸಲಾತಿ ಮಾಡಬೇಕಿತ್ತು. ತರಾತುರಿಯಲ್ಲಿ ಸಂಜೆ 6 ಗಂಟೆಗೆ ಒಳ ಮೀಸಲಾತಿ ಬಿಲ್ ಮಂಡಿಸಿ, ಚರ್ಚೆ ಇಲ್ಲದೇ ಮಂಜೂರು ಮಾಡಿಕೊಂಡು ಓಡಿ ಹೋದುದನ್ನು ಖಂಡಿಸುವುದಾಗಿ ತಿಳಿಸಿದರು.
ಎಸ್‍ಇಪಿ, ಟಿಎಸ್‍ಪಿಯ 39 ಸಾವಿರ ಕೋಟಿ ಮೊತ್ತವನ್ನು ಸಿದ್ದರಾಮಯ್ಯನವರ ಸರಕಾರ ಬೇರೆ ಉದ್ದೇಶಕ್ಕೆ ಬಳಸಿದೆ ಎಂದು ಟೀಕಿಸಿದ ಅವರು, ಹೊಸ ಬಜೆಟ್‍ನಲ್ಲಿ ನೀಡುವ 42 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗಳು, ಅನ್ಯ ಉದ್ದೇಶಕ್ಕೆ ಬಳಸಬಾರದು. ಅದು ಕೇವಲ ಎಸ್‍ಸಿ, ಎಸ್‍ಟಿ ಜನಾಂಗದ ಮಕ್ಕಳ ಉದ್ಯೋಗ, ಶಿಕ್ಷಣ, ಭೂ ಒಡೆತನ, ಗಂಗಾ ಕಲ್ಯಾಣ ಸೇರಿ ಅವರ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು. ಗ್ಯಾರಂಟಿಗಳು, ಅನ್ಯ ಉದ್ದೇಶಕ್ಕೆ ಈ ಹಣ ಬಳಸಿದರೆ ಸರಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ ಎಸ್‍ಸಿ ಪಟ್ಟಿಯಲ್ಲಿ ಬರುವ 101 ಜಾತಿಗೆ ಸಮರ್ಪಕವಾಗಿ ಮೀಸಲಾತಿ ಸೌಲಭ್ಯ ದೊರಕುತ್ತಿಲ್ಲ ಎಂದು ಆಕ್ಷೇಪಿಸಿದರು. ಮಾದಿಗರ ಸಮುದಾಯದವರು ಹಲವು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರು. ಕೇಂದ್ರದ ನರೇಂದ್ರ ಮೋದಿಜೀ ಅವರ ಸರಕಾರವು ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಹಾಕಿಸಿ, ಸಾಲಿಸಿಟರ್ ಜನರಲ್, ಅಟಾರ್ನಿ ಜನರಲ್ ಅವರು ಸ್ವತಃ ಕೋರ್ಟ್ ಮುಂದೆ ಹಾಜರಾಗಿ ವಾದ ಮಂಡಿಸಿದ್ದರು. ಮೋದಿಜೀ ಅವರ ಸರಕಾರವು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ; ಒಳ ಮೀಸಲಾತಿ ಕೊಡಲು ಒಪ್ಪಿಗೆ ಇದೆ ಎಂದು ತಿಳಿಸಿತ್ತು. ಸುಪ್ರೀಂ ಕೋರ್ಟ್ ಆಗಸ್ಟ್ 1, 2024 ರಂದು ಆದೇಶ ಮಾಡಿದೆ. ಒಳ ಮೀಸಲಾತಿ ಕೊಡಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆ ಎಂದು ತಿಳಿಸಿದೆ ಎಂದರು.
ಸಿದ್ದರಾಮಯ್ಯನವರ ಸರಕಾರವು ಬಿಲ್ ಮಂಡಿಸುವ ಮೊದಲು ಸರ್ವ ಪಕ್ಷಗಳ ಅಭಿಪ್ರಾಯ ಪಡೆಯಲಿದೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಸಿದ್ದರಾಮಯ್ಯನವರ ಸರಕಾರವು ಏಕಪಕ್ಷೀಯವಾಗಿ ನಿರ್ಣಯ ಮಾಡಿತು. ಯಾವುದನ್ನೂ ಶಾಸನಬದ್ಧವಾಗಿ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ, ಮಾಧುಸ್ವಾಮಿ ಅವರ ವರದಿಯಂತೆಯೂ ಮಾಡಿಲ್ಲ. ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಂತೆಯೂ ಮಾಡಿಲ್ಲ ಎಂದು ಟೀಕಿಸಿದರು.
ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನು ಗಾಳಿಗೆ ತೂರಿ, 3 ಕ್ಯಾಟಗರಿ ಮಾಡಿ, ಖಾಜಿ ನ್ಯಾಯ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಇದರಡಿ ಅಲೆಮಾರಿ ಜನಾಂಗಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು. ಯಾವುದೇ ಕಾರಣಕ್ಕೂ ನೇಮಕಾತಿ ನಿಲ್ಲಬಾರದು; ಬಡ್ತಿಯಲ್ಲಿ ಮೀಸಲಾತಿ ಸಿಗಬೇಕು ಎಂದು ಮಾನ್ಯ ರಾಜ್ಯಪಾಲರಿಗೆ ಮನವಿ ಮಾಡಿದ್ದಾಗಿ ಹೇಳಿದರು.